ಅಡುಗೆ ಮಾಡುವಾಗ ಸುಟ್ಟ ಗಾಯಕ್ಕೆ ಮನೆಮದ್ದು!

Written by Anand raj

Published on:

ಸುಟ್ಟಗಾಯಗಳಲ್ಲಿ ಕೆಲವಾರು ವಿಧಗಳಿವೆ. ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಅಕಾಸ್ಮಾತ್ತಾಗಿ ಬಿಸಿ ಅಥವಾ ಬೆಂಕಿಯ ಜ್ವಾಲೆ ತಗುಲಿ ಆಗುವ ಗಾಯಗಳೇ ಹೆಚ್ಚು. ಉಳಿದಂತೆ ಅರಿವಿಲ್ಲದೇ ಇಸ್ತ್ರಿಪೆಟ್ಟಿಗೆ ತಗುಲಿ, ಟೀ ಕಾಫಿ ಬಿದ್ದು, ದೂರದಿಂದ ಬೆಂಕಿಯ ಕಿಡಿ ಹಾರಿ ಬಂದು ಮೈ ಮೇಲೆ ಬೀಳುವುದು ಮೊದಲಾದ ಕಾರಣಗಳಿಂದ ಎದುರಾದ ಗಾಯಗಳನ್ನು ಅಕಸ್ಮಿಕ ಎಂದು ಕರೆಯಬಹುದು. ಅಷ್ಟೇ ಅಲ್ಲ, ಸತತ ಬಿಸಿಲಿನ ಹೊಡೆತಕ್ಕೂ ಚರ್ಮ ಸುಡಬಹುದು! ಇದಕ್ಕೆ sunburn ಅಥವಾ ಬಿಸಿಲಿನ ಘಾಸಿ ಎಂದು ಕರೆಯುತ್ತಾರೆ. ಬನ್ನಿ ಹಾಗಾದರೆ ಸಣ್ಣ ಪುಟ್ಟ ಗಾಯವಾದರೆ ಯಾವೆಲ್ಲಾ ಮನೆಮದ್ದುಗಳನ್ನು ಅನುಸರಿಸಬೇಕು ಎಂಬುದನ್ನು ನೋಡೋಣ..

ತಣ್ಣೀರಿನ ಸಿಂಚನ

ಯಾವುದೇ ದರ್ಜೆಯ ಸುಟ್ಟಗಾಯಗಳಾದರೂ ಸರಿ, ತಕ್ಷಣವೇ ತಣ್ಣೀರು ಸುರಿಯುವುದು ಅತ್ಯಂತ ಅಗತ್ಯವಾದ ಕ್ರಮವಾಗಿದೆ. ಈ ಗಾಯದ ಮೇಲೆ ತಣ್ಣೀರನ್ನು ಸತತವಾಗಿ ಕನಿಷ್ಟ ಇಪ್ಪತ್ತು ನಿಮಿಷಗಳಾದರೂ ಸುರಿಯುತ್ತಿರುವಂತೆ ಮಾಡಿ. ಮೊದಲ ಎರಡು ಬಗೆಯ ದರ್ಜೆಯ ಗಾಯಗಳಿಗೆ ಬಳಿಕ ಸೌಮ್ಯ ಸೋಪಿನಿಂದ ಮತ್ತು ತಣ್ಣೀರಿನಿಂದ ತೊಳೆದುಕೊಳ್ಳಿ. ಬಳಿಕವೇ ಒರೆಸಿಕೊಂಡು ಚಿಕಿತ್ಸಾ ಕ್ರಮ ಅನುಸರಿಸಿ.

ಲೋಳೆಸರದ ತಿರುಳು
ಮೊದಲ ದರ್ಜೆಯ ಗಾಯಕ್ಕೆ ಈ ತಿರುಳು ಅತ್ಯುತ್ತಮ ಪರಿಹಾರವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ ಈ ತಿರುಳನ್ನು ಎರಡನೆಯ ದರ್ಜೆಯ ಗಾಯಗಳಿಗೂ ಹಚ್ಚಬಹುದು. ಲೋಳೆಸರ ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು ಈ ಗುಣ ಉರಿಯುತ್ತಿರುವ ಗಾಯವನ್ನು ತಣಿಸಿ ಉರಿಯನ್ನು ಇಲ್ಲವಾಗಿಸುತ್ತದೆ. ಅಲ್ಲದೇ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಇದಕ್ಕಾಗಿ ತಾಜಾ ಲೋಳೆಸರದ ಕೋಡೊಂದನ್ನು ತೆರೆದು ತಿರುಳನ್ನು ಸಂಗ್ರಹಿಸಿ ನೇರವಾಗಿ ಸುಟ್ಟಭಾಗದ ಮೇಲೆ ಹಚ್ಚಬೇಕು.

ಪ್ರತಿಜೀವಕ ಮುಲಾಮುಗಳು

ಪ್ರತಿ ಮನೆಯ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಮತ್ತು ವಿಶೇಷವಾಗಿ ಅಡುಗೆಮನೆಯಲ್ಲಿ ಈ ಮುಲಾಮೊಂದನ್ನು ಸದಾ ಕೈಗೆ ಸುಲಭವಾಗಿ ಸಿಗುವಂತಿರಿಸಬೇಕು. ಅಷ್ಟೇ ಅಲ್ಲ, ಉಪಯೋಗಿಸಿರಲಿ, ಇಲ್ಲದಿರಲಿ, ಕಾಲಕಾಲಕ್ಕೆ ಇದರ ಗರಿಷ್ಟ ಬಳಕೆಯ ದಿನಾಂಕ ಮತ್ತು ಲಭ್ಯವಿರುವ ಪ್ರಮಾಣವನ್ನು ಪರಿಶೀಲಿಸುತ್ತಾ ಇರಬೇಕು. ಇವೆರಡರಲ್ಲಿ ಯಾವುದು ಕಡಿಮೆ ಇರುತ್ತದೆಯೋ ಅದು ಸಂಭವಿಸುವ ಮೊದಲೇ ಹೊಸದೊಂದು ಮುಲಾಮನ್ನು ತಂದಿಟ್ಟುಬಿಡಬೇಕು. ಈ ಮುಲಾಮು ಯಾವುದೇ ದಿನಸಿ ಅಂಗಡಿಯಲ್ಲಿ ಸುಲಭವಾಗಿ ದೊರಕುತ್ತದೆ. ಯಾವುದೇ ಬಗೆಯ ಸುಟ್ಟಗಾಯವಾದರೂ ಸರಿ, ಮೊದಲಾಗಿ ತಣ್ಣೀರಿನಿಂದ ತಣಿಸಿ ಒರೆಸಿದ ತಕ್ಷಣ ಈ ಮುಲಾಮನ್ನು ಹಚ್ಚಿಕೊಳ್ಳಬೇಕು. ಬಳಿಕ ಈ ಮುಲಾಮು ಬೇರೆ ಕಡೆ ತಾಕದಂತೆ ಕ್ರಿಮಿರಹಿತ ಬಟ್ಟೆಯ ಪಟ್ಟಿ ಕಟ್ಟಿಕೊಳ್ಳಬೇಕು. ದಿನಕ್ಕೆರಡು ಬಾರಿ ಈ ಪಟ್ಟಿಯನ್ನು ಬದಲಿಸಿ ಹೊಸದಾಗಿ ಮುಲಾಮು ಹಚ್ಚಿಕೊಳ್ಳಬೇಕು.

ನೋವು ನಿವಾರಕಗಳು

ನೋವು ನಿವಾರಕ ಗುಳಿಗೆಗಳಲ್ಲಿ ತಮ್ಮದೇ ಆದ ಅಡ್ಡಪರಿಣಾಮಗಳಿರುವ ಕಾರಣ ಅಗತ್ಯವಿಲ್ಲದೇ ಈ ಗುಳಿಗೆಗಳನ್ನು ಸೇವಿಸದಿರಿ. ಒಂದು ವೇಳೆ ನೋವು ಅಸಾಧ್ಯವಾಗಿದ್ದರೆ ಮತ್ತು ಈ ಗುಳಿಗೆಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದಿದ್ದರೆ ಮಾತ್ರ ಸೂಕ್ತ ಪ್ರಮಾಣದಲ್ಲಿ ಮಾತ್ರವೇ ಸೇವಿಸಿ.

ಜೇನು

ಜೇನು ಅತ್ಯುತ್ತಮ ಗುಣಪಡಿಸುವ ಗುಣಗಳನ್ನು ಹೊಂದಿದ್ದು ಸುಟ್ಟಗಾಯಕ್ಕೂ ಅತ್ಯುತ್ತಮವಾದ ಫಲವನ್ನು ನೀಡುತ್ತದೆ. ಸುಟ್ಟ ಗಾಯಗಳಿಗೆ ಜೇನು ತಂಪು ನೀಡುವ ಜೊತೆಗೇ ಇದರ ಉರಿಯೂತ ನಿವಾರಕ ಗುಣ, ಶಿಲೀಂಧ್ರ ನಿವಾರಕ ಗುಣ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳು ಶೀಘ್ರವಾಗಿ ಗಾಯ ಮಾಗಲು ಮತ್ತು ಹೊಸ ಚರ್ಮ ಬೆಳೆಯಲು ನೆರವಾಗುತ್ತದೆ.

ತಂಪಿನ ಭಾರ ನೀಡುವಿಕೆ: (Cool compress)

ಗಾಯವಿರುವ ಭಾಗದ ಮೇಲೆ ತಣ್ಣನೆಯ ನೀರಿನಲ್ಲಿ ಅದ್ದಿರುವ ಬಟ್ಟೆಯನ್ನು ಕೊಂಚ ಬಿಗಿಯಾಗಿ ಕಟ್ಟುವ ಮೂಲಕ ಉರಿಯನ್ನು ಶಮನಗೊಳಿಸಬಹುದು. ಸಾಮಾನ್ಯವಾಗಿ ಬಾವು ಎದುರಾಗ ಗಾಯಗಳಿಗೆ ಈ ವಿಧಾನವನ್ನು ಅನುಸರಿಸಬಹುದು. ಈ ವಿಧಾನದಲ್ಲಿ ತಣ್ಣೀರಿನಲ್ಲಿ ಮುಳುಗಿಸಿ ಹಿಂಡಿದ ಬಟ್ಟೆಯನ್ನು ಗಾಯದ ಮೇಲೆ ಕೊಂಚ ಬಿಗಿಯಾಗಿ ಕಟ್ಟಿ ಸುಮಾರು ಐದರಿಂದ ಹದಿನೈದು ನಿಮಿಷದ ಬಳಿಕ ತೆಗೆದು ಹಿಂಡಿ ಮತ್ತೊಮ್ಮೆ ಹೊಸನೀರಿನಲ್ಲಿ ಅದ್ದಿ ಕಟ್ಟಬೇಕು. ಆದರೆ ಈ ವಿಧಾನವನ್ನು ಅತಿಯಾಗಿ ಮಾಡಬಾರದು, ಏಕೆಂದರೆ ಈಗಾಗಲೇ ಸುಟ್ಟಿರುವ ಚರ್ಮದಲ್ಲಿ ಬಟ್ಟೆಯ ಬಿಗಿತದಿಂದಲೇ ಇನ್ನಷ್ಟು ಹೆಚ್ಚು ಉರಿಯಾಗಲು ಕಾರಣವಾಗಬಹುದು.

ಬಿಸಿಲಿಗೆ ಒಡ್ಡುವುದನ್ನು ಆದಷ್ಟೂ ತಪ್ಪಿಸಿ

ಸುಟ್ಟಿರುವ ಚರ್ಮ ಬಿಸಿಲಿನ ಝಳಕ್ಕೆ ಅತೀವವಾಗಿ ಉರಿಯುವ ಕಾರಣ ಈ ಭಾಗವನ್ನು ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ಆದಷ್ಟೂ ತಪ್ಪಿಸಿ. ಬಿಸಿಲಿಗೆ ಹೋಗಬೇಕಾಗಿ ಬರುವ ಸಂದರ್ಭದಲ್ಲಿ ಈ ಭಾಗವನ್ನು ಬಿಳಿಯ ಬಟ್ಟೆಯಿಂದ ಪೂರ್ಣವಾಗಿ ಆವರಿಸಿಕೊಳ್ಳುವಂತೆ ಮಾಡಿ. ಒಂದು ವೇಳೆ ಈ ಭಾಗಕ್ಕೆ ಬಿಸಿಲು ಬಿದ್ದರೆ ಇದು ಇನ್ನಷ್ಟು ಕೆಂಪಗಾಗಿ ಉರಿ ಇನ್ನಷ್ಟು ಹೆಚ್ಚುತ್ತದೆ ಹಾಗೂ ಈಗಾಗಲೇ ಸುಟ್ಟಿರುವ ಭಾಗ ಇನ್ನಷ್ಟು ಹದಗೆಡುತ್ತದೆ.

ಅರಿಶಿನ

ಗಾಯಗಳ ಮೇಲೆ ತಣ್ಣೀರಿನಲಲ್ಲಿ ಅರಿಶಿನ ಮಿಶ್ರಣ ಮಾಡಿ ಹಚ್ಚುವ ಮೂಲಕವೂ ತಕ್ಷಣದ ಉರಿ ಪರಿಹಾರವಾಗುತ್ತದೆ ಹಾಗೂ ಶೀಘ್ರ ಗುಣವಾಗಲು ನೆರವಾಗುತ್ತದೆ. ಈ ವಿಧಾನದ ಇನ್ನೊಂದು ಗುಣವೆಂದರೆ ಗಾಯದ ಗುಣವಾದ ಬಳಿಕ ಸುಟ್ಟ ಗಾಯದ ಕಲೆಗಳು ಇಲ್ಲದೇ ಇರುವುದು.

Related Post

Leave a Comment