ನಮ್ಮ ಅಡುಗೆ ಮನೆ ಒಂದು ರೀತಿಯಲ್ಲಿ ಸಣ್ಣ ಔಷಧಾಲಯ. ನಾವು ದಿನನಿತ್ಯ ಬಳಸುವ ಅನೇಕ ಮಸಾಲೆ ಪದಾರ್ಥಗಳು ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತವೆ. ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯಕ್ಕೆ ಹೆಚ್ಚಾಗಿಯೇ ಪ್ರಯೋಜನ ನೀಡುತ್ತವೆ. ಅಂತಹ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು.
ಲವಂಗವು ರಂಜಕ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ವಿಟಮಿನ್ ಸಿ, ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಅನೇಕ ಪೋಷಕಾಂಶಗಳ ಜೊತೆಗೆ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
ಲವಂಗದಿಂದ ಆರೋಗ್ಯಕ್ಕೆ ಲಾವೆಲ್ಲಾ ರೀತಿಯ ಪ್ರಯೋಜನಗಳಿದೆ ಎನ್ನುವ ಬಗ್ಗೆ ನೋಡುವುದಾದರೆ…
ವಸಡಿನ ಸಮಸ್ಯೆಗೆ
ಲವಂಗದ ಆಂಟಿಮೈಕ್ರೊಬಿಯಲ್, ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ವಸಡಿನ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಲ್ಲು ಹುಟ್ಟುವುದರಿಂದ ಉಂಟಾಗುವ ನೋವನ್ನು ಕಡಿಮೆ ಮಾಡುತ್ತದೆ.
ವಸಡಿನಲ್ಲಿ ಹುಳುಕು ಹಲ್ಲು ಉಂಟಾಗಿ ನೋವು ಇದ್ದರೆ ಲವಂಗವನ್ನು ಆ ಜಾಗದಲ್ಲಿ ಹಾಕುವುದು ಒಳ್ಳೆಯದು. ಅದೇ ರೀತಿ ಬಾಯಿ ದುರ್ವಾಸನೆ ಇರುವವರು ಲವಂಗವನ್ನು ಸೇವಿಸಬಹುದು. ಲವಂಗವನ್ನು ಪುಡಿ ಮಾಡಿ ನೀರಿನೊಂದಿಗೆ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸುವುದಿರಂದ ಬಾಯಿಯ ದುರ್ವಾಸನೆಯನ್ನು ನಿವಾರಣೆ ಮಾಡಬಹುದಾಗಿದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ
ಬೆಳಗ್ಗೆ ಲವಂಗವನ್ನು ಸೇವಿಸುವುದರಿಂದ ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ಅತಿಸಾರ, ವಾಕರಿಕೆ, ವಾಂತಿ, ಅಸಂಯಮ, ವಾಯು, ಹೊಟ್ಟೆ ನೋವು, ಮಲಬದ್ಧತೆ ಇತ್ಯಾದಿಗಳನ್ನು ಗುಣಪಡಿಸುತ್ತದೆ.
ಜೀರ್ಣಕ್ರಿಯೆ ಸುಲಭವಾಗುವುದರಿಂದ ಹೊಟ್ಟೆ ಉಬ್ಬುವುದು. ಇದು ಅಜೀರ್ಣದಂತಹ ಸಮಸ್ಯೆಗಳನ್ನು ಸಹ ಸರಿಪಡಿಸಬಹುದು. ಹೀಗಾಗಿ ಬೆಳಗ್ಗಿನ ತಿಂಡಿಯಲ್ಲಿ ಲವಂಗ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು.
ಲಿವರ್‌ನ ಆರೋಗ್ಯ
ಲವಂಗದಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ಲಿವರ್‌ನಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಲಿವರ್ ನಲ್ಲಿ ಉಳಿದಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಇದರಲ್ಲಿರುವ ಯುಜೆನಾಲ್ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ.
ಯಕೃತ್ತನ್ನು ಶುದ್ಧೀಕರಿಸುವುದರ ಜೊತೆಗೆ ಇದು ಯಕೃತ್ತಿನಲ್ಲಿ ಕೊಬ್ಬಿನ ಅಂಶಗಳು ಶೇಖರಣೆಯಾಗಿದ್ದರೆ ಅದನ್ನು ಕರಗಿಸುತ್ತದೆ.
ದೇಹದ ತೂಕ ಇಳಿಕೆಗೆ
ಲವಂಗದ ರಸವು ಅಧಿಕ ಕೊಲೆಸ್ಟ್ರಾಲ್‌ನಿಂದ ಬೊಜ್ಜು ತಡೆಯಲು ಸಹಾಯ ಮಾಡುತ್ತದೆ.
ನಿಮ್ಮ ಆಹಾರದಲ್ಲಿ ಲವಂಗವನ್ನು ಸೇರಿಸುವುದರಿಂದ ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗುವ ಕೊಬ್ಬನ್ನು ಕಡಿಮೆ ಮಾಡಬಹುದು. ಇದು ನಮ್ಮ ದೇಹದ ತೂಕ ಮತ್ತು ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ಲವಂಗವು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ವೈದ್ಯರು ಹೇಳುವ ಪ್ರಕಾರ ಮೆಟಾಬಾಲಿಕ್ ಸಮಸ್ಯೆಯಿಂದ ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಕಾಡುತ್ತಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಲವಂಗ ಸಹಾಯ ಮಾಡುತ್ತದೆ.
ಮೇದೋಜ್ಜೀರಕ ಗ್ರಂಥಿಯ ಕಾರ್ಯನಿರ್ವಹಣೆಯನ್ನು ಸುಧಾರಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೀಲಿಯಾಗಿದೆ.ಮಧುಮೇಹ ರೋಗಿಗಳು ಲವಂಗವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದಿನಾ ರಾತ್ರಿ ಒಂದು ಲವಂಗವನ್ನು ತಿನ್ನಿ
ಪ್ರತಿದಿನ ರಾತ್ರಿ ಮಲಗುವಾಗ ಒಂದು ಲವಂಗವನ್ನು ಜಗಿದು ಮಲಗಿದರೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸರಿಪಡಿಸಬಹುದಾಗಿದೆ. ಇದರ ಉತ್ಕರ್ಷಣ ನಿರೋಧಕ ಮತ್ತು ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣಗಳು ಶ್ವಾಸಕೋಶ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ.
ಲವಂಗವು ಉಸಿರಾಟದ ಪ್ರದೇಶದಲ್ಲಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ಶ್ವಾಸಕೋಶಕ್ಕೆ ಪ್ರವೇಶಿಸದಂತೆ ತಡೆಯುತ್ತದೆ.