ತನ್ನ ಕೊಳಲನ್ನು ಮುರಿದೆಸೆದ ಶ್ರೀ ಕೃಷ್ಣ!ಯಾಕೆ ಗೋತ್ತಾ?

Written by Anand raj

Published on:

ಕೃಷ್ಣ ಹಾಗೂ ರಾಧೆಯ ಕಥೆಯು ಎಷ್ಟೇ ಬಾರಿ ಕೇಳಿದರೂ ಸಹ ಮತ್ತೆ ಮತ್ತೆ ಕೇಳ ಬೇಕೆನಿಸುವಷ್ಟು ಮಧುರವಾಗಿರುತ್ತದೆ ಏಕೆಂದರೆ ಇದು ದೇವರು ಹಾಗೂ ಮನುಷ್ಯರ ನಡುವಿನ ಅತ್ಯುನ್ನತ ಬಂಧ.

ರಾಧೆಯ ಬಗ್ಗೆ ಅನೇಕ ಕಥೆಗಳು ಪ್ರಸ್ತಾವನೆಯಲ್ಲಿದ್ದರು ಸಹ ಈ ಒಂದು ಕಥೆ ಬಹಳಷ್ಟು ಪುರಾಣಗಳಲ್ಲಿ ಪ್ರಕಟಿತವಾಗಿದೆ.

ಕೃಷ್ಣ ವೃಂದಾವನದಲ್ಲಿ ವಾಸಿಸುತ್ತಿದ್ದ ಎಲ್ಲಾ ಗೋಪಿಕೆಯರಿಗೆ ಅತಿ ಪ್ರೀತಿ ಪಾತ್ರ .ಎಲ್ಲರನ್ನೂ ತನ್ನ ಮೋಡಿ ಮಾತುಗಳಿಂದ ಬಹಳ ಆಕರ್ಷಿಸುತ್ತಿದ್ದರು ,ಅವರ ಸೌಂದರ್ಯ ಹಾಗೂ ವ್ಯಕ್ತಿತ್ವಕ್ಕೆ ವೃಂದಾವನದ ಎಲ್ಲಾ ಪ್ರಜೆಗಳು ಮನಸೋತಿದ್ದರು.

ಕೃಷ್ಣನನ್ನು ಕೊಲ್ಲುವುದೊಂದೇ ಜೀವನದ ಗುರಿಯಾಗಿಟ್ಟುಕೊಂಡಿದ್ದ ಕಂಸ ಕೃಷ್ಣನನ್ನು ಕೊಳ್ಳಲು ಬಹಳ ಅಸುರರನ್ನು ಸುತ್ತಮುತ್ತಲಿನ ಎಲ್ಲ ನಗರಗಳಿಗೂ ಕಳಿಸುತ್ತಾನೆ.

ಅದೇ ಹುಡುಕಾಟದಲ್ಲಿ ಬೃಂದಾವನಕ್ಕೆ ಧಾವಿಸಿದ ಹಲವಾರು ರಾಕ್ಷಸರನ್ನು ಕೊಂದು ವೃಂದಾವನದ ಜನಕ್ಕೆ ಮತ್ತೆ ಶಾಂತಿಯನ್ನು ಪ್ರಸಾಧಿಸುತ್ತಿದ್ದರೂ ಕೃಷ್ಣ.

ರಾಧಾ ವೃಂದಾವನದಿಂದ ಸ್ವಲ್ಪ ದೂರವಿದ್ದ ರೇಪಳ್ಳಿ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಳು.
ಇವರಿಬ್ಬರ ನಡುವಿನ ಸಂಬಂಧ ಭಕ್ತಿ , ಪ್ರೀತಿ , ಗೌರವ , ತ್ಯಾಗ ಎಲ್ಲದಕ್ಕೂ ಮೀರಿರುವಂತದ್ದು ಅದರಿಂದಾಗಿ ಕೃಷ್ಣನಿಗೆ ರಾಧೇಯೊಡನೆ ಸಮಯ ಕಳೆಯುವುದೆಂದರೆ ಬಹಳ ಇಷ್ಟ.ವೃಂದಾವನದಲ್ಲಿರುವ ಗೋಪಿಕೆಯರು ಕೃಷ್ಣನೊಡನೆ ಸಮಯ ಕಳೆಯಲು ಕಾಯುತ್ತಿದ್ದರೆ ಕೃಷ್ಣ ಮಾತ್ರ ಸಮಯ ಸಿಕ್ಕಾಗಲೆಲ್ಲ ಗೋಪಿಕೆಯ ರಿಂದ ತಪ್ಪಿಸಿಕೊಳ್ಳುತ್ತಾ ರಾಧೆಯ ಬಳಿ ಓಡುತ್ತಿದ್ದರು.

ಕೃಷ್ಣ ವೃಂದಾವನದಿಂದ ಹೊರ ಹೋಗುವ ಸಮಯ ಬಂದಾಯಿತು.ಕಂಸ , ಕೃಷ್ಣ ಹಾಗೂ ಬಲರಾಮರಿಗೆ ಮಲ್ಲಯುದ್ಧಕ್ಕೆ ಭಾಗವಹಿಸಲು ಆಹ್ವಾನ ಕಳುಹಿಸಿದ್ದ ,ಕೃಷ್ಣ ಹಾಗೂ ಬಲರಾಮನನ್ನು ಕರೆದೊಯ್ಯಲೂ ಮಧುರೆಯಿಂದ ಅಕ್ರೂರ ಎನ್ನುವ ವ್ಯಕ್ತಿಯನ್ನು ಕಂಸ ಕಳುಹಿಸಿದ್ದ.ಕೃಷ್ಣ ವೃಂದಾವನವನ್ನು ಬಿಟ್ಟು ಹೋಗುತ್ತಿದ್ದಾನೆಂಬ ಸುದ್ದಿ ಕಾಡ್ಗಿಚ್ಚಿನಂತೆ ವೇಗವಾಗಿ ನಗರವೆಲ್ಲಾ ಹರಿದಾಡಿತು.

ಕೃಷ್ಣನನ್ನು ವೃಂದಾವನದಿಂದ ಹೋಗದಂತೆ ತಡೆಯಲು ಇಡೀ ಗೋಪಿಯರೆಲ್ಲರೂ ರಥಕ್ಕೆ ಅಡ್ಡಗಟ್ಟಿದ್ದರು ಸಹ ಕೃಷ್ಣ ಭೂಲೋಕದಲ್ಲಿ ಪೂರೈಸಬೇಕಾದ ಹಲವಾರು ಮಹತ್ತರವಾದ ಕಾರ್ಯಗಳನ್ನು ಪೂರ್ಣಗೊಳಿಸಲು ಬೇರೆ ದಾರಿಯಿಲ್ಲದೆ ಎಲ್ಲರನ್ನೂ ಸಮಾಧಾನ ಗೊಳಿಸುತ್ತಾ ಅಲ್ಲಿಂದ ಹೊರಟರು.ಹೊರಡುವ ಮುಂಚೆ ರಾಧೆಯನ್ನು ಭೇಟಿಯಾದ ಕೃಷ್ಣ ಆದರೆ ಅವರಿಬ್ಬರೂ ಪರಸ್ಪರ ಒಬ್ಬರ ಮನಸ್ಸನ್ನು ಒಬ್ಬರು ಪೂರ್ಣವಾಗಿ ತಿಳಿದಿದ್ದರಿಂದಾಗಿ ಮಾತನಾಡಲು ಪದಗಳೇ ಬಾರದೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಣ್ಣೀರು ಹಾಕುತ್ತಾ ಕೆಲ ನಿಮಿಷಗಳ ಕಾಲ ಮೌನವಾಗಿ ಕಳೆದರು.

ರಾಧೆ ಕೊನೆಯಲ್ಲಿ ಮೌನ ಮುರಿಯುತ್ತ “ಕೃಷ್ಣ ನೀನು ನನ್ನ ಆತ್ಮ , ನನ್ನ ಪ್ರಾಣ ನೀನು ನನ್ನನ್ನು ತೊರೆದೋದರೂ ಸಹ ಮಾನಸಿಕವಾಗಿ ನಿನ್ನನ್ನು ನನ್ನಿಂದ ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿ ತನ್ನ ಪ್ರೀತಿಯನ್ನು ಕೃಷ್ಣನಿಗೆ ತಿಳಿಸಿದಳು. ಆಗ ಕೃಷ್ಣ “ರಾಧೆ ನೀನು ನನ್ನ ಅಂಶ ಈ ಭೂಮಿಗೆ ಸ್ವಚ್ಛವಾದ ನಿರ್ಮಲವಾದ ಪ್ರೀತಿ ಹೇಗಿರಬೇಕೆಂದು ತೋರಿಸಲು ನಾನು ನಿನ್ನನ್ನು ಸೃಷ್ಟಿಸಿದೆ” ಎಂದು ರಾಧೆಯ ಅವತಾರದ ಬಗ್ಗೆ ಪೂರ್ಣವಾಗಿ ತಿಳಿಸಿ ,”ನಾನು ಪುನಃ ನಿನ್ನನ್ನು ಭೇಟಿಯಾಗುತ್ತೇನೆ ನೀನು ನನಗೆ ಹೇಳಬೇಕಾದ ಮಾತುಗಳೆಲ್ಲವೂ ನಿನ್ನ ಮನಸ್ಸಿನಲ್ಲಿ ಯೋಚಿಸಿದರೂ ಸಹ ಅದು ನನಗೆ ತಲುಪುತ್ತದೆ” ಎಂದು ಹೇಳಿ ಕೃಷ್ಣ ಹಾಗೂ ಬಲರಾಮ ಅಲ್ಲಿಂದ ಅಕ್ರೂರದೊಂದಿಗೆ ಮಥುರೆಗೆ ಹೊರಟರು.

ವರ್ಷಗಳು ಕಳೆದವು ,ಕೃಷ್ಣ ತನ್ನ ಅವತಾರದ ಭಾಗವಾಗಿ ಕಂಸ , ಶಿಶುಪಾಲ ಇನ್ನೂ ಹಲವಾರು ರಾಕ್ಷಸರನ್ನು ಸಂಹರಿಸಿ ಜರಾಸಂಧನೊಂದಿಗೆ ಶತ್ರುತ್ವ ಬೆಳೆಸಿಕೊಂಡು ತನ್ನ ಪ್ರಜೆಗಳನ್ನು ಅವರಿಂದ ರಕ್ಷಿಸಲು ಮಥುರೆಯಿಂದ ತನ್ನ ಸಾಮ್ರಾಜ್ಯವನ್ನು ದ್ವಾರಕೆಯಲ್ಲಿ ನಿರ್ಮಿಸುವುದರ ಮೂಲಕ , ರಾತ್ರೋ ರಾತ್ರಿ ಮಥುರೆಯನ್ನು ತೊರೆದು ತನ್ನ ಪ್ರಜೆಗಳೊಂದಿಗೆ ದ್ವಾರಕೆಗೆ ತೆರಳಿದರು.

ಇತ್ತ ವೃಂದಾವನದಲ್ಲಿ ರಾಧೆ ಮಾತ್ರ ನಿರಂತರವಾಗಿ ಕೃಷ್ಣನ ಬಗ್ಗೆಯೇ ಯೋಚಿಸುತ್ತಾ ಪ್ರಪಂಚವೆಲ್ಲವೂ ಪಕ್ಕಕ್ಕಿಟ್ಟು ಕೃಷ್ಣನೇ ಪ್ರಪಂಚ ವೆಂಬಂತೆ ಹಗಲು ರಾತ್ರಿ ಚಿಂತಿಸುತ್ತಾ ಒಬ್ಬಳೇ ಸಮಯ ಕಳೆಯುತ್ತಿದ್ದಳು.

ಅದನ್ನು ಗಮನಿಸಿದ ರಾಧೆಯ ತಾಯಿ ಇವಳಿಗೆ ಹೇಗಾದರೂ ಮದುವೆ ಮಾಡಿದರೆ ಸರಿ ಹೋಗಬಹುದೆಂದು ಭಾವಿಸಿ ಅಭಿಮನ್ಯು ಅಥವಾ ಅಯಾನ್ ಎನ್ನುವ ವ್ಯಕ್ತಿಯೊಡನೆ ರಾಧೆಯ ವಿವಾಹ ಮಾಡಿಸಿದರು.

ಇನ್ನು ರಾಧಾ ಮಡದಿಯಾಗಿ ತನ್ನ ಕರ್ತವ್ಯ ನಿಭಾಯಿಸುತ್ತ ತಾಯಿಯಾಗಿ ತನ್ನ ಮಕ್ಕಳನ್ನು ಪೋಷಿಸುತ್ತಾ ಸಮಯ ಕಳೆಯುತ್ತಿದ್ದಳು.

ಕೆಲವು ವರ್ಷಗಳು ಕಳೆದವು , ರಾಧೆಗೆ ವಯಸ್ಸಾಯಿತು ಅವಳು ಸಾಯುವ ಮುಂಚೆ ಕೃಷ್ಣನನ್ನು ಒಂದು ಬಾರಿ ನೋಡಬೇಕೆಂದು ತೀರ್ಮಾನಿಸಿ ಯಾರಿಗೂ ಹೇಳದೆ ಮನೆಯನ್ನು ತೊರೆದು ಮೌನವಾಗಿ ಕೃಷ್ಣನನ್ನು ಹುಡುಕುತ್ತಾ ಹಲವಾರು ದಿನಗಳವರೆಗೂ ಕಾಲ್ನಡಿಗೆಯಲ್ಲೇ ನಡೆಯುತ್ತಾ ದ್ವಾರಕೆಗೆ ತಲುಪಿದಳು.

ಅರಮನೆಗೆ ತಲುಪಿ ಕೃಷ್ಣನನ್ನು ಭೇಟಿಯಾದಳು , ಒಬ್ಬರನ್ನೊಬ್ಬರು ಭೇಟಿಯಾಗಿ ನೋಡಿ ಬಹಳ ವರ್ಷಗಳು ಕಳೆದಿದ್ದರೂ ಸಹ ಆಗಲೂ ಮಾತನಾಡಲು ಇಬ್ಬರಿಗೂ ಪದಗಳೇ ಬಾರಲಿಲ್ಲ.ಅವರಿಬ್ಬರೂ ಮಾನಸಿಕವಾಗಿ ಜೊತೆಗೆ ಇದ್ದುದ್ದರಿಂದ ಅವರಿಗೆ ಮಾತಿನ ಅವಶ್ಯಕತೆ ಇರಲಿಲ್ಲ.

“ನಾನು ಸಾಯುವವರೆಗೂ ನಿನ್ನೊಂದಿಗೆ ಸಮಯ ಕಳೆಯಬೇಕೆಂದು ಕೊಂಡಿರುವೆ , ನಾನು ಸಾಯುವ ಮುಂಚೆಯಾದರೂ ನಿನಗೆ ಅಡುಗೆ ಮಾಡಿ ತಿನಿಸಬೇಕು ಎಂಬುದೇ ನನ್ನ ಆಸೆ ,ನಾನು ನಿನ್ನ ಅರಮನೆಯಲ್ಲಿ ಅಡುಗೆ ಮಾಡುವವಳಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿ ಕೆಲಸಕ್ಕೆ ಸೇರಿಕೊಂಡಳು ರಾಧೆ.

ಈ ವಿಷಯ ಕೃಷ್ಣ ಹಾಗೂ ರಾಧೆಯನ್ನು ಹೊರತುಪಡಿಸಿ ಮತ್ಯಾರಿಗೂ ತಿಳಿದಿರಲಿಲ್ಲ ಆದರೆ ರಾಧೆ ಕೃಷ್ಣನಿಂದ ಬಹಳ ದೂರವಿದ್ದರೂ ಸಹ ಒಂದು ದಿನವೂ ಅವಳಿಗೆ ಕೃಷ್ಣ ದೂರವಾಗಿದ್ದಾನೆ ಭಾವನೆ ಬಂದಿರಲಿಲ್ಲ ಆದರೆ ಈಗ ಪ್ರತಿದಿನವೂ ಕೃಷ್ಣನನ್ನು ನೋಡುತ್ತಿದ್ದರೂ ಸಹ ಅವರೊಂದಿಗೆ ಮನಸಾರೆ ಮಾತನಾಡಲಾಗದೆ ಕೃಷ್ಣನೊಂದಿಗೆ ಸಮಯ ಕಳೆಯಲಾಗದೆ ಕೃಷ್ಣ ತನ್ನಿಂದ ದೂರವಾಗಿದ್ದನೆಂಬ ಭಾವನೆ ಅವಳ ಮನಸ್ಸನ್ನು ಕೊಲ್ಲಲು ಶುರು ಮಾಡಿತ್ತು.

ದೈಹಿಕವಾಗಿ ಹತ್ತಿರವಿರುವುದು , ಆಧ್ಯಾತ್ಮಿಕವಾಗಿ ಹತ್ತಿರವಿರುವುದು ಬೇರೆ ಬೇರೆ ಎಂದು ನಿಧಾನಕ್ಕೆ ರಾಧೆಗೆ ತಿಳಿಯಲು ಪ್ರಾರಂಭಿಸಿತು ಹಾಗಾಗಿ ಅರಮನೆಯನ್ನು ಬಿಡಲು ತೀರ್ಮಾನಿಸಿದಳು.

ರಾಧೆಗೆ ಬಹಳ ವಯಸ್ಸಾಗಿತ್ತು , ಬಹಳ ದುರ್ಬಲವಾಗಿದ್ದಳು.ಎಲ್ಲಿಗೆ ಹೋಗುವುದೆಂದು ಅರಿವೇ ಇಲ್ಲದೆ ದಾರಿಯಲ್ಲಿ ನಡೆಯುತ್ತಾ ಸಾಗಿದಳು ಆದರೆ ಬಹಳ ದೂರ ನಡೆಯಲಾರದೆ ಮೂರ್ಛೆ ಹೋದಳು ರಾಧೆ.

ರಾಧೆಗೆ ಹೆಚ್ಚು ಸಮಯವಿಲ್ಲವೆಂಬುದನ್ನು ಅರಿತ ಕೃಷ್ಣ ರಾಧೆಯ ಬಳಿ ಪ್ರತ್ಯಕ್ಷಗೊಂಡು ಅವಳನ್ನು ತನ್ನ ತೊಡೆಯ ಮೇಲೆ ಮಲಗಿಸಿ ಕೊಳ್ಳುತ್ತಾರೆ.

ಕೃಷ್ಣನ ಸ್ಪರ್ಶದಿಂದ ಎಚ್ಚರಗೊಂಡ ರಾಧೆ ಕೃಷ್ಣನನ್ನೇ ನೋಡುತ್ತಾ ಮುಗುಳ್ನಗುತ್ತಾ “ನಾನೆಂತಹ ಅದೃಷ್ಟವಂತೆ ಕೃಷ್ಣ , ದೇವರ ತೊಡೆಯ ಮೇಲೆಯೇ ಪ್ರಾಣ ಬಿಡುವ ಅದೃಷ್ಟ ಯಾರಿಗೂ ಸಿಗುವುದಿಲ್ಲ” ಎಂದಳು ಆಗ ಕೃಷ್ಣ “ರಾಧೆ ನಿನ್ನ ಕೊನೆಯ ಆಸೆ ಏನೆಂದು ತಿಳಿಸು?” ಎಂದರೆ “ಏನೂ ಇಲ್ಲ” ಎಂದು ತನ್ನ ತಲೆಯಾಡಿಸಿದಳು ರಾಧಾ ಆದರೆ ಕೃಷ್ಣ “ರಾಧ ನೀನು ಇದುವರೆಗೂ ನನ್ನನ್ನೇನೂ ಕೇಳಲಿಲ್ಲ ನೀನೇನೇ ಕೇಳಿದರೂ ನಾನು ನಿನಗೆ ಕೊಡಲು ಸಿದ್ಧನಾಗಿದ್ದೇನೆ , ನಿನಗೆ ಚಿರಕಾಲ ಯವ್ವನ ಬೇಕೇ? ಏನಾದರೂ ಸರಿ ನೀನೀಗ ಕೇಳಲೇಬೇಕೆಂದು” ಒತ್ತಾಯಿಸಿದಾಗ “ನೀನೊಂದು ಬಾರಿ ನನಗಾಗಿ ಕೊಳಲು ನುಡಿಸೆಂದಳು ರಾಧಾ.

ಕೃಷ್ಣ ಹಿಂದೆಂದೂ ನುಡಿಸಿದಂತಹ ಸುಮಧುರವಾದ ರಾಗವನ್ನು ನುಡಿಸಿ ಅದನ್ನು ಸ
ರಾಧೆಗೆ ಅರ್ಪಿಸಿದರು.ಆ ಮಧುರವಾದ ರಾಗವನ್ನು ಆಲಿಸುತ್ತಾ ಕೃಷ್ಣನ ಮೇಲೆ ತಲೆಯಿಟ್ಟು ಮುಗುಳ್ನಗುತ್ತಾ ಕೊನೆಗೆ ಕೃಷ್ಣನಲ್ಲಿಯೇ ಲೀನಾವಾದಳು ರಾಧಾ.

ರಾಧೆಯ ಮರಣದಿಂದ ಅಪಾರವಾದ ದುಃಖದಲ್ಲಿ ಮುಳುಗಿದ ಶ್ರೀಕೃಷ್ಣ ,ತನ್ನ ಜೀವನದಲ್ಲಿ ಇನ್ನೆಂದೂ ಕೊಳಲು ಭಾರಿಸಬಾರದೆಂದು ತೀರ್ಮಾನಿಸಿ ಆ ಕೊಳಲನ್ನು ಮುರಿದು ಅದನ್ನು ಶಾಶ್ವತವಾಗಿ ಅಲ್ಲೇ ಇದ್ದ ಪೊದೆಗಳಲ್ಲೆಸೆದು ಅಲ್ಲಿಂದ ಅರಮನೆಗೆ ತೆರಳಿದರು.

ಧನ್ಯವಾದಗಳು.

Related Post

Leave a Comment