ತಾಯಿಯರ ಎದೆಹಾಲು ಜಾಸ್ತಿ ಆಗಲು!

Written by Anand raj

Published on:

ಮಗುವಿಗೆ ತಾಯಿಯ ಹಾಲನ್ನು ಕನಿಷ್ಠ ಆರು ತಿಂಗಳವರೆಗೆ ನೀಡಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ಕೆಲವರಿಗೆ ಎದೆಯಲ್ಲಿ ಹಾಲು ಬರುವುದಿಲ್ಲ. ಇದಕ್ಕೆ ಕಾರಣಗಳು ಅನೇಕ. ಹಾಗೆಂದು ತಾಯಂದಿರು ಕೊರಗುವ ಅವಶ್ಯಕತೆಯಿಲ್ಲ. ನಿಮ್ಮ ಎದೆ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಅನೇಕ ಮಾರ್ಗಗಳಿವೆ. ಈ ವಿಧಾನಗಳನ್ನು ಬಳಸಿಕೊಂಡು ನಿಮ್ಮ ಎದೆ ಹಾಲು ಉತ್ಪಾದನೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಎದೆ ಹಾಲು ಹೆಚ್ಚಿಸಲು ತಾಯಂದಿರು ಬಳಸುವ ಮನೆಮದ್ದುಗಳೇನು? ಅಭ್ಯಾಸಗಳೇನು? ತಜ್ಞರು ಹೇಳುವುದೇನು ತಿಳಿಯಲು ಮುಂದೆ ಓದಿ.

ಆಗಾಗ್ಗೆ ಸ್ತನ್ಯಪಾನ ಮಾಡಿ

ನಿಮ್ಮ ಮಗು ಸ್ತನವನ್ನು ಹೀರುವಾಗ ಹಾಲು ಉತ್ಪಾದಿಸಲು ಸ್ತನಗಳನ್ನು ಪ್ರಚೋದಿಸುವ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಆದ್ದರಿಂದ ನೀವು ಹೆಚ್ಚು ಸ್ತನ್ಯಪಾನ ಮಾಡುತ್ತಿದ್ದರೆ ಸ್ತನಗಳಿಂದ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ. ಮಗುವಿಗೆ ದಿನಕ್ಕೆ 8 ರಿಂದ 12 ಬಾರಿ ಸ್ತನ್ಯಪಾನ ಮಾಡುವುದು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಗುವಿಗೆ ಎರಡೂ ಸ್ತನಗಳಿಂದಲೂ ಹಾಲುಣಿಸಬೇಕು. ಮೊದಲನೇ ಸ್ತನದಲ್ಲಿ ಹಾಲು ಕಡಿಮೆಯಾಗುತ್ತಿದ್ದಂತೆ, ಎರಡನೇ ಸ್ತನವನ್ನು ಕೊಡಿ.

ಹೀಗೆ ನವಜಾತ ಶಿಶುವಿಗೆ ಕನಿಷ್ಠ 10 ನಿಮಿಷಗಳ ಕಾಲ ಎರಡೂ ಸ್ತನಗಳಲ್ಲಿ ಹಾಲುಣಿಸಿದಾಗ ಹಾಲಿನ ಉತ್ಪಾದನೆ ಹೆಚ್ಚಾಗಲು ಸಹಾಯವಾಗುತ್ತದೆ. ಮಗು ಜನಿಸಿದ ಮೊದಲ ಕೆಲವು ವಾರಗಳಲ್ಲಿ, ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ ಸ್ತನ್ಯಪಾನ ಮಾಡಬೇಕು. ಇದರಿಂದ ನಿಮ್ಮ ಎದೆ ಹಾಲು ಪೂರೈಕೆಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ಮಗು ನಿದ್ರಿಸಿದರೆ ಶುಶ್ರೂಷೆಯನ್ನು ಮುಂದುವರಿಸಲು ನಿಧಾನವಾಗಿ ಎಚ್ಚರಗೊಳಿಸಲು ಪ್ರಯತ್ನಿಸಿ. ನಿಮ್ಮ ಮಗು ಹಾಲುಣಿಸುವಿಕೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹೆಚ್ಚು ಉತ್ಪತ್ತಿಯಾಗುತ್ತದೆ.

​ಎರಡು ಗ್ಲಾಸ್ ಹಾಲು

ಹೊಸ ಅಮ್ಮಂದಿರು ತಮ್ಮ ಆಹಾರದ ಬಗ್ಗೆ ಸರಿಯಾದ ಕಾಳಜಿ ವಹಿಸುವಂತೆ ಸೂಚಿಸಲಾಗುತ್ತದೆ. ಈ ಸಮಯದಲ್ಲಿ ಆಹಾರದಲ್ಲಿ ಹೊಸ ಹೊಸ ಪದಾರ್ಥಗಳನ್ನು ಸೇರಿಸುವ ಮೂಲಕ ತಾಯಂದಿರು ಎದೆಹಾಲು ಹೆಚ್ಚಿಸಿಕೊಳ್ಳಬಹುದು. ಈ ಬಗ್ಗೆ ಸಲಹೆ ನೀಡಿರುವ ತಜ್ಞರಾದ ಡಾ.ಸ್ವಾತಿ ಬತ್ವಾಲ್, ಹಾಲುಣಿಸುವ ಮಹಿಳೆಯರಿಗೆ ಒಂದೇ ದಿನದಲ್ಲಿ ಕನಿಷ್ಠ 1 ಸಾವಿರ ಮಿಲಿಗ್ರಾಂ ಕ್ಯಾಲ್ಸಿಯಂ ಅಗತ್ಯವಿರುತ್ತದೆ.

ಒಂದು ಗ್ಲಾಸ್ ಹಾಲಿನಲ್ಲಿ 300 ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಆದ್ದರಿಂದ, ಅವರು ಕನಿಷ್ಠ ಎರಡು ಗ್ಲಾಸ್ ಹಾಲು ಮತ್ತು ಒಂದು ಬಟ್ಟಲು ಮೊಸರನ್ನು ಸೇವಿಸಬೇಕು. ಹಾಗೆಯೇ ಬಾರ್ಲಿಯನ್ನು ಸೇವಿಸಬೇಕು. ಇದರಲ್ಲಿ ಬೀಟಾ ಗ್ಲೂಕೋಸ್ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ನೀವು ಇದನ್ನು ಸೂಪ್, ಗಂಜಿ ರೂಪದಲ್ಲಿಯೂ ಸೇವಿಸಬಹುದು ಎಂದು ತಿಳಿಸಿದ್ದಾರೆ.

​ಪೌಷ್ಟಿಕಾಂಶ ಆಹಾರ ಸೇವಿಸಿ

ಸ್ತನ್ಯಪಾನ ಮಾಡುವಾಗ ಪೌಷ್ಠಿಕಾಂಶ ಆಹಾರ ಸೇವಿಸುವುದು ಒಳ್ಳೆಯದು. ಎದೆ ಹಾಲು ತಯಾರಿಸಲು ಉತ್ತಮ ಪ್ರಮಾಣದ ಶಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ ಆರೋಗ್ಯಕರ ಹಾಲು ಪೂರೈಕೆಯನ್ನು ಹೆಚ್ಚಿಸಲು ಆರೋಗ್ಯಕರ ತಿಂಡಿಗಳನ್ನು ಸೇವಿಸಿ. ಓಟ್ ಮೀಲ್, ಗಾಢ ಹಸಿರು ಬಣ್ಣದ ಸೊಪ್ಪುಗಳು ಮತ್ತು ಬಾದಾಮಿ ಮುಂತಾದ ಕೆಲವು ಹಾಲು ಹೆಚ್ಚಿಸುವ ಆಹಾರಗಳನ್ನು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿ. ಇದು ನಿಮಗೆ ಹೆಚ್ಚು ಅಗತ್ಯವಿರುವ ಹೆಚ್ಚುವರಿ ಕ್ಯಾಲೊರಿಗಳನ್ನು ಪಡೆಯಲು ಸಹಾಯ ಮಾಡುತ್ತದೆ.

​ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ

ನೀವು ಪ್ರತಿದಿನ ಮಾಡುತ್ತಿರುವ ಕೆಲವು ಕೆಲಸಗಳು ಸಹ ನಿಮ್ಮ ಎದೆ ಹಾಲು ಪೂರೈಕೆಯ ಮೇಲೆ ಪರಿಣಾಮ ಬೀರಬಹುದು. ಅಂದರೆ ಧೂಮಪಾನ, ಜನನ ನಿಯಂತ್ರಣ ಮಾತ್ರೆ ಸೇವನೆ, ಒತ್ತಡ ಮತ್ತು ಆಯಾಸವು ನಿಮ್ಮ ಎದೆ ಹಾಲಿನ ಪೂರೈಕೆಗೆ ಅಡ್ಡಿಯುಂಟು ಮಾಡಬಹುದು. ಆದರೆ ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಎದೆ ಹಾಲಿನ ಪೂರೈಕೆಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ನಿಮಗೆ ಸಾಧ್ಯವಾಗಬಹುದು. ಯಾವುದೇ ಹೊಸ ಔಷಧಿಗಳನ್ನು ಪ್ರಾರಂಭಿಸುವ ಮೊದಲು ನೀವು ಸ್ತನ್ಯಪಾನ ಮಾಡುತ್ತಿದ್ದೀರಿ ಎಂದು ನಿಮ್ಮ ವೈದ್ಯರಿಗೆ ಹೇಳಲು ಮರೆಯದಿರಿ. ವಿಶೇಷವಾಗಿ ಜನನ ನಿಯಂತ್ರಣ ಮಾತ್ರೆಯಿಂದ ದೂರವಿರಲು ಪ್ರಯತ್ನಿಸಿ.

​ಹೆಚ್ಚು ನೀರು ಕುಡಿಯಿರಿ

ಎದೆ ಹಾಲು ಸುಮಾರು ಶೇ.90ರಷ್ಟು ನೀರಿನಿಂದ ಕೂಡಿರುತ್ತದೆ. ಆದ್ದರಿಂದ ಪ್ರತಿದಿನ ಸಾಕಷ್ಟು ನೀರನ್ನು ಕುಡಿಯಲು ಮರೆಯಬೇಡಿ. ಸುಮಾರು 6 ರಿಂದ 8 ಗ್ಲಾಸ್ ನೀರು ಅಥವಾ ಹಾಲು, ಜ್ಯೂಸ್ ಅಥವಾ ಚಹಾದಂತಹ ಇತರ ಆರೋಗ್ಯಕರ ದ್ರವ ಕುಡಿಯುವುದರಿಂದ ನಿಮ್ಮ ದೇಹವನ್ನು ಹೈಡ್ರೇಟ್ ಮಾಡಬಹುದು. ನಿಮಗೆ ಬಾಯಾರಿಕೆಯಾಗಿದ್ದರೆ ಹೆಚ್ಚು ನೀರು ಕುಡಿಯಿರಿ. ತಲೆತಿರುಗುವಿಕೆ, ತಲೆನೋವು ಅಥವಾ ಒಣ ಬಾಯಿಯಾದರೆ ಇವು ನೀವು ಸಾಕಷ್ಟು ನೀರನ್ನು ಕುಡಿಯದಿರುವ ಲಕ್ಷಣಗಳಾಗಿವೆ.

​ಮೆಂತ್ಯ ಕಾಳುಗಳು

ಎದೆ ಹಾಲು ಹೆಚ್ಚಿಸುವ ಮತ್ತೊಂದು ಸೂಪರ್ ಫುಡ್ ಎಂದರೆ ಮೆಂತ್ಯ ಕಾಳುಗಳು. ಆಯುರ್ವೇದವು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಮೆಂತ್ಯ ಕಾಳಿಗೆ ಒತ್ತು ನೀಡುತ್ತದೆ. ನೀವು ಮೆಂತ್ಯ ಲಡ್ಡು ಅಥವಾ ಮೆಂತ್ಯ ಚೂರ್ಣ ತಯಾರಿಸಿ, ನಿಮ್ಮ ಊಟದ ನಂತರ ಅದನ್ನು ಸೇವಿಸಬಹುದು. ಮೆಂತ್ಯ ಕಾಳುಗಳನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಸಿ, 6-7 ಗಂಟೆಗಳ ನಂತರ ಆ ನೀರನ್ನು ಕುಡಿಯುವುದು ಸುಲಭವಾದ ಮಾರ್ಗ. ಮತ್ತೊಂದು ಬೀಜವೆಂದರೆ ಫೆನ್ನೆಲ್ ಬೀಜಗಳು, ಇದು ಎದೆ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ಕುದಿಯುವ ನೀರಿನಲ್ಲಿ ಎರಡು ಚಮಚ ಫೆನ್ನೆಲ್ ಬೀಜಗಳನ್ನು ಸೇರಿಸಿ, ನಂತರ ಆ ಬೀಜದ ನೀರನ್ನು ಸೋಸಿ ಸೇವಿಸಿ.

​ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ

ಬಳಲಿಕೆ ಮತ್ತು ಒತ್ತಡವು ನಿಮ್ಮ ಹಾಲು ಪೂರೈಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಸ ತಾಯಿಯಂದಿರು ವಿಶ್ರಾಂತಿ ಪಡೆಯಲು ಸಮಯ ಸಿಗುವುದು ಕಷ್ಟವಾಗಿದ್ದರೂ, ವಿಶ್ರಾಂತಿ ತುಂಬಾ ಮುಖ್ಯವಾಗಿದೆ. ಆದ್ದರಿಂದ ಮಗು ನಿದ್ದೆಮಾಡುವಾಗ ಚಿಕ್ಕನಿದ್ರೆ ತೆಗೆದುಕೊಳ್ಳಲು ಪ್ರಯತ್ನಿಸಿ ಅಥವಾ ಮನೆಯವರ ಸಹಾಯವನ್ನು ಕೇಳಿ. ನೀವು ವಿಶ್ರಾಂತಿ ಪಡೆದಾಗ ಮತ್ತು ಹೆಚ್ಚು ಒತ್ತಡಕ್ಕೊಳಗಾಗದಿದ್ದಾಗ ನಿಮ್ಮ ದೇಹವು ಹೆಚ್ಚುವರಿ ಶಕ್ತಿಯನ್ನು ಪಡೆದು ಆರೋಗ್ಯಕರ ಎದೆ ಹಾಲು ಪೂರೈಕೆ ಮಾಡುತ್ತದೆ.

Related Post

Leave a Comment