ಗರ್ಭಿಣಿಯರಿಗೆ ಇಂತಹ ಕನಸು ಮುಂಬರುವ ದಿನಗಳ ವಿಚಾರಗಳು ತಿಳಿಸುತ್ತವೆ!

Written by Anand raj

Published on:

ಗರ್ಭಿಣಿಯರಿಗೆ ಬೀಳುವ ಕನಸುಗಳು ಬೇರೆ ಸಮಯದಲ್ಲಿ ಬೀಳುವ ಕನಸುಗಳಿಗಿಂತ ವಿಭಿನ್ನವಾಗಿರುತ್ತವೆ. ಅವರಿಗೆ ಕನಸುಗಳೂ ಹೆಚ್ಚು, ಕೆಟ್ಟ ಕನಸುಗಳೂ ಹೆಚ್ಚು. ಹೀಗೇಕೆ?

ಕನಸುಗಳು ಪ್ರತಿಯೊಬ್ಬರಿಗೂ ಬೀಳುತ್ತವೆ ಹಾಗೂ ಇವು ಆರೋಗ್ಯಕಾರಿ ಕೂಡಾ. ಆದರೆ, ಗರ್ಭಿಣಿಯರಿಗೆ ಬೀಳುವ ಕನಸುಗಳೇ ವಿಭಿನ್ನವಾಗಿರುತ್ತವೆ. ಹೆಚ್ಚಿನ ಬಾರಿ ಗರ್ಭಿಣಿಯರಿಗೆ ಬೀಳುವ ಕನಸುಗಳು ಬೆಳಗಾದ ಮೇಲೂ ನೆನಪಿನಲ್ಲಿರುತ್ತವೆ. ಈ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಆಳವಾದ ಕನಸುಗಳು ಬೀಳುವ ಜೊತೆಗೆ, ದುಸ್ವಪ್ನಗಳೂ ಹೆಚ್ಚು. ಹಾಗಂಥ ಇದೇನು ಆತಂಕಕ್ಕೀಡಾಗುವ ವಿಚಾರವಲ್ಲ. ಗರ್ಭಿಣಿಯರಿಗೆ ಬೇರೆ ರೀತಿಯ ಕನಸುಗಳು ಬೀಳಲು ಕಾರಣವೇನು, ಅವುಗಳ ಅರ್ಥವೇನು ನೋಡೋಣ.

ಪ್ರಗ್ನೆನ್ಸಿಯಲ್ಲಿ ಹೆಚ್ಚುವ ಕನಸುಗಳು:—ಪ್ರಗ್ನೆನ್ಸಿಯ ಬಳಿಕ ಕನಸು ಬೀಳುವುದು ಜಾಸ್ತಿಯಾಗಿದೆ ಎಂದು ಹೆದರುವವರು ಅನೇಕರು. ಇದಕ್ಕೆ ಕಾರಣ ಬಹಳ ಸರಳವಾಗಿದೆ. ಸಾಮಾನ್ಯವಾಗಿ 7-8 ಗಂಟೆ ವ್ಯಕ್ತಿಯ ನಿದ್ದೆಯ ಸಮಯವಿರುತ್ತದೆ. ಆದರೆ, ಗರ್ಭಾವಸ್ಥೆಯಲ್ಲಿದ್ದಾಗ ಮಹಿಳೆಗೆ ಹೆಚ್ಚು ಸುಸ್ತಾಗುತ್ತದೆ, ತಲೆ ತಿರುಗುತ್ತದೆ, ಸಂಕಟ ಹೆಚ್ಚುತ್ತದೆ. ಇಂಥ ದೈಹಿಕ ಬದಲಾವಣೆಗಳ ಕಾರಣದಿಂದ ಗರ್ಭಿಣಿಯರು ಹೆಚ್ಚು ಸಮಯ ಮಲಗುತ್ತಾರೆ. ಹೆಚ್ಚು ಸಮಯ ಮಲಗುವುದರಿಂದ ಸಾಮಾನ್ಯವಾಗೇ ಹೆಚ್ಚು ಕನಸುಗಳು ಬೀಳುತ್ತವೆ. 

ನೈಜ ಕನಸುಗಳು:-ಸಾಮಾನ್ಯರಿಗೆ ಬೀಳುವ ಕನಸುಗಳು ಸ್ಪಷ್ಟವಾಗಿರುವುದಿಲ್ಲ. ಅಪರೂಪಕ್ಕೊಮ್ಮೆ ಮಾತ್ರ ಆಳವಾದ, ಎದುರಿಗೆ ನಿಜದಲ್ಲೇ ನಡೆಯುತ್ತಿದೆ ಎನ್ನಿಸುವಂಥ ಕನಸುಗಳು ಬೀಳುತ್ತವೆ. ಆದರೆ, ಗರ್ಭಿಣಿಯರಿಗೆ ಹೀಗೆ, ನಿಜವಾಗಿಯೂ ನಡೆಯುತ್ತಿದೆ, ತಾವದನ್ನು ಎದುರಿಸುತ್ತಿದ್ದೇವೆ ಎಂಬಂಥ ಕನಸುಗಳು ಸಾಕಷ್ಟು ಸಂಖ್ಯೆಯಲ್ಲಿ ಬೀಳುತ್ತವೆ. ಇವುಗಳಲ್ಲಿ ಭಾವನೆಗಳು, ದೃಶ್ಯಾವಳಿಗಳು ಹೆಚ್ಚಿರುತ್ತವೆ. ಇವನ್ನೇ ವಿವಿಡ್ ಡ್ರೀಮ್ಸ್ ಎನ್ನುವುದು. ಇಂಥ ಕನಸುಗಳು ಗರ್ಭಿಣಿಯರಲ್ಲಿ ಹೆಚ್ಚು. ಎಚ್ಚರಾದ ಬಳಿಕವೂ ನಿಜ ಯಾವುದು, ಕನಸು ಯಾವುದು ಎಂದು ಸಾವರಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. 

ತಾಯ್ತನದ ಕನಸುಗಳು:–ಗರ್ಭಿಣಿಯಾದಾಗ ಮನಸ್ಸು ಹಾಗೂ ದೇಹ ಪ್ರಾಕೃತಿಕವಾಗಿಯೇ ತಾಯ್ತನ ಎದುರಿಸಲು ಸಜ್ಜಾಗುತ್ತಿರುತ್ತವೆ. ಮನೆಗೆ ಹೊಸ ಸದಸ್ಯನನ್ನು ಎದುರುಗೊಳ್ಳುವ ಅಂಥದೊಂದು ಸಂಭ್ರಮ ಬೇರೆಲ್ಲೂ ಅನುಭವಿಸಿರಲಾರಿರಿ. ಇದರೊಂದಿಗೆ ಹೆರಿಗೆ, ಮಗು ಸಾಕುವ ಬಗ್ಗೆ ಕೊಂಚ ಭಯವೂ ತಾಯಿಯಾಗುವವಳಲ್ಲಿ ಸೇರಿಕೊಂಡಿರುತ್ತದೆ. ಕನಸು ಮನಸ್ಸಿನ ತುಂಬಾ ಮಗುವೇ ಇರುತ್ತದೆ. ಹಾಗಾಗಿ, ಗರ್ಭಿಣಿಯ ಕನಸುಗಳಲ್ಲಿ ಹೆಚ್ಚು ಬಾರಿ ಈಗಾಗಲೇ ಮಗುವಾದಂತೆ, ತಾನದರ ಪಾಲನೆ ಪೋಷಣೆಯಲ್ಲಿ ತೊಡಗಿರುವಂತೆ ಕಾಣಿಸಬಹುದು. ಅಥವಾ ಮಗುವನ್ನು ಎತ್ತಿಕೊಂಡಿರುವಂತೆ ಎನಿಸಬಹುದು. ಕೆಲ ಮಹಿಳೆಯರಿಗೆ ಪುಟ್ಟ ಮಗು ತನ್ನೊಂದಿಗೆ ಮಾತಾಡುವಂತೆಯೂ ಕನಸಿನಲ್ಲಿ ಕಾಣಿಸುವುದಿದೆ. 

ದುಸ್ವಪ್ನಗಳು:–ಗರ್ಭಿಣಿಯರಿಗೆ ದುಸ್ವಪ್ನಗಳು ಹೆಚ್ಚು. ಏಕೆ ಗೊತ್ತಾ? ಕನಸುಗಳು ನಮ್ಮ ಒಳಮನಸ್ಸಿನ ಆತಂಕ, ಭಯ, ನೋವು, ಕಾಳಜಿಗಳೆಲ್ಲವನ್ನೂ ಒಳಗೊಂಡಿರುತ್ತವೆ. ಅಂದರೆ ಅದು ನಮ್ಮ ಆರ್ಥಿಕ ಸ್ಥಿತಿಗತಿಯ ಕುರಿತ ಚಿಂತೆ, ಮಗು ಬೆಳೆಸುವ ಭಯ, ಕುಟುಂಬ ಎದುರಿಸುತ್ತಿರುವ ಸವಾಲುಗಳೆಲ್ಲವೂ ಇದರಲ್ಲಿ ಸೇರಿರುತ್ತವೆ. ಇದರೊಂದಿಗೆ ಹೆರಿಗೆ ನೋವಿನ ಭಯ ಕಾಡುತ್ತಿರುತ್ತದೆ. ಇಷ್ಟೆಲ್ಲ ತಲೆಯಲ್ಲಿ ತುಂಬಿಕೊಂಡಾಗ ಸಹಜವಾಗಿಯೇ ಮೆದುಳು ಗರ್ಭಿಣೆಯ ಚಿಂತೆಗಳನ್ನೆಲ್ಲ ಕನಸಿಗೆ ಕಳಿಸುತ್ತದೆ. ಈ ಚಿಂತೆ, ಆತಂಕಗಳು ಸೇರಿ ದುಸ್ವಪ್ನಗಳು ಹೆಚ್ಚಬಹುದು. ಮಗುವಿಗೇನೋ ಆದಂತೆ, ಹೆರಿಗೆಯಲ್ಲಿ ತನಗೇ ಏನೋ ಆದಂತೆ, ಮಗುವನ್ನು ಕಳೆದುಕೊಂಡಂತೆ ಕನಸುಗಳು ಬೀಳಬಹುದು.

ಕನಸಿನ ವಿನ್ಯಾಸ ಬದಲಾಗುವುದು:–ಗರ್ಭಿಣಿಯರಿಗೆ ಬೀಳುವ ಕನಸುಗಳೇ ಬೇರೆ ರೀತಿಯಲ್ಲಿರುತ್ತದೆ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ಬದಲಾಗುತ್ತಿರುವ ಹಾರ್ಮೋನ್‌ಗಳು. ಹಾರ್ಮೋನಿನ ಏರುಪೇರು ಬಹಳಷ್ಟು ಬದಲಾವಣೆಗಳಿಗೆ ಕಾರಣವಾಗುತ್ತದೆ. ಅದರಲ್ಲಿ ಕನಸಿನ ವಿನ್ಯಾಸವೂ ಒಂದು. ಇವೆಲ್ಲವೂ ಸಹಜವಾಗಿವೆ. ಇದಕ್ಕಾಗಿ ಆತಂಕ ಪಡುವ ಅಗತ್ಯವಿಲ್ಲ. ದುಸ್ವಪ್ನಗಳು ಗರ್ಭಿಣಿಯರನ್ನು ಬಾಧಿಸುತ್ತಿದ್ದರೆ ಇವುಗಳನ್ನು ಕಡಿಮೆ ಮಾಡಲು ಯೋಗ, ಪ್ರಾಣಾಯಾಮ ಸಹಾಯಕ್ಕೆ ಬರಬಹುದು.  ಅದರ ಜೊತೆ ಸದಾ ಸಕಾರಾತ್ಮಕ ಯೋಚನೆಯನ್ನು ರೂಢಿಸಿಕೊಳ್ಳುವುದು ಕೂಡಾ ಒಳ್ಳೆಯದು. 

Related Post

Leave a Comment