ಇಡೀ ವಿಶ್ವ ಕೊರೋನಾ ಸಂಕಷ್ಟದಿಂದ ಬಳಲುತ್ತಿದ್ದು, ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಒಂದು ಪರಿಣಾಮಕಾರಿ ಔಷಧಿಯ ನಿರೀಕ್ಷೆಯಲ್ಲಿ ಇದೆ ಜಗತ್ತು. ಈಗಾಗಲೇ ವ್ಯಾಕ್ಸಿನ್ ಗಳು ಬಂದಿದ್ದರೂ ಇನ್ನು ಪರಿಣಾಮಕಾರಿ ಔಷಧಿಗಳ ಸಂಶೋಧನೆಯಲ್ಲಿ ಹಲವು ರಾಷ್ಟ್ರಗಳು ತೊಡಗಿಕೊಂಡಿದೆ. ಆಧುನಿಕ ಔಷಧಿಗಳ ಸಂಶೋಧನೆಯ ನಡುವೆ ಯಲ್ಲೇ ನಮ್ಮ ದೇಶದಲ್ಲಿ ಆಯುರ್ವೇದ ಔಷಧಿಗಳ ಉಪಯೋಗದ ಕುರಿತಾಗಿ ಆಗಾಗ ಕೆಲವು ಕಡೆ ಸುದ್ದಿಗಳು ಆಗುತ್ತಲೇ ಇವೆ. ಕಳೆದ ಒಂದು ವರ್ಷದಿಂದಲೂ ಆಯುರ್ವೇದದ ಕುರಿತಾಗಿ ಮಾತನಾಡುತ್ತಿದ್ದರೂ ಅದರಿಂದ ಪರಿಣಾಮಕಾರಿ ಫಲಿತಾಂಶ ಬಂದಿರುವ ಯಾವುದೇ ಅಧಿಕೃತ ಮಾಹಿತಿಗಳು ಇನ್ನು ಸುದ್ದಿಯಾಗಿಲ್ಲ.
ಆದರೆ ಈಗ ನೆರೆಯ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಮುತ್ತುಕೂರು ಮಂಡಲದ ವ್ಯಾಪ್ತಿಯಲ್ಲಿರುವ ಕೃಷ್ಣ ಪಟ್ಟಣಂ ಎನ್ನುವ ಹಳ್ಳಿಯ ಸರ್ಪಂಚ್ ಆನಂದಯ್ಯ ಅವರು ನೀಡುತ್ತಿರುವ ಆಯುರ್ವೇದ ಔಷಧಿ ದೊಡ್ಡ ಸದ್ದನ್ನು ಮಾಡಿದೆ. ಕಳೆದ ಎರಡು ಮೂರು ದಿನಗಳಿಂದ ಆನಂದಯ್ಯ ಅವರು ಕೊರೊನಾ ನಿವಾರಣೆಗೆ ನೀಡುತ್ತಿರುವ ಆಯುರ್ವೇದ ಔಷಧೀಯ ವಿಷಯ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆನಂದಯ್ಯ ಅವರ ಆಯುರ್ವೇದ ಔಷಧಿ ಬಹಳ ಪರಿಣಾಮಕಾರಿಯಾಗಿದೆ ಎನ್ನುವ ಸುದ್ದಿ ಬಂದ ಕೂಡಲೇ ಸಹಸ್ರಾರು ಸಂಖ್ಯೆಯಲ್ಲಿ ಜನರು ಕೃಷ್ಣ ಪಟ್ಟಣಂ ಗ್ರಾಮದ ಕಡೆಗೆ ಬಂದಿದ್ದಾರೆ.
ದೊಡ್ಡ ಸಂಖ್ಯೆಯಲ್ಲಿ ಜನರು ಬಂದ ಕೂಡಲೇ ಜಿಲ್ಲಾಡಳಿತ ಈ ವಿಷಯದ ಕುರಿತಾಗಿ ತನಿಖೆಯನ್ನು ನಡೆಸಲು ಅಧಿಕಾರಿಗಳ ತಂಡವನ್ನು ರಚಿಸಿ ಸ್ಥಳಕ್ಕೆ ಕಳುಹಿಸಿದ್ದು, ಜನರ ನಿಯಂತ್ರಣಕ್ಕಾಗಿ ಪೊಲೀಸರನ್ನು ಕೂಡಾ ಕಳುಹಿಸಿತ್ತು ಎನ್ನಲಾಗಿದೆ. ಅಧಿಕಾರಿಗಳು ಬಂದಂತಹ ವೇಳೆಯಲ್ಲಿ ಅವರ ಎದುರಿನಲ್ಲೇ ಆಯುರ್ವೇದ ಔಷಧಿಯ ಎರಡು ಹನಿಗಳ ಪ್ರಭಾವದಿಂದ ಆಕ್ಸಿಜನ್ ಲೆವೆಲ್ ಕಡಿಮೆಯಾಗಿದ್ದ ಕೊರೊನಾ ಸೋಂಕಿತ ನಲ್ಲಿ ಆಕ್ಸಿಜನ್ ಲೆವೆಲ್ ಹೆಚ್ಚಾಯಿತು ಎನ್ನಲಾಗಿದೆ. ಇದನ್ನು ನೋಡಿದ ಅಧಿಕಾರಿಗಳು ಆಯುರ್ವೇದ ಔಷಧೀಯ ಬಗ್ಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.
ಸುಮಾರು 40 ಸಾವಿರಕ್ಕಿಂತ ಅಧಿಕ ಮಂದಿ ಆಯುರ್ವೇದ ಔಷಧಿ ಕ್ಕಾಗಿ ಬಂದಿದ್ದರು ಎನ್ನಲಾಗಿದೆ. ವಿಷಯ ರಾಜ್ಯಾದ್ಯಂತ ಸುದ್ದಿ ಆದ ಕೂಡಲೇ ರಾಜ್ಯಸರ್ಕಾರವು ಜಾಗೃತವಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಔಷಧಿಯ ಸತ್ಯಾಸತ್ಯತೆಯನ್ನು ಹಾಗೂ ಅದು ಎಷ್ಟು ಪರಿಣಾಮಕಾರಿ ಎನ್ನುವುದನ್ನು ತಿಳಿದುಕೊಳ್ಳಲು ಔಷಧದ ಮಾದರಿಯನ್ನು ಸಂಗ್ರಹಿಸಿ ಐಸಿಎಂಆರ್ ಗೆ ಪರೀಕ್ಷೆಗೆ ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ. ಅಲ್ಲದೆ ಈ ಔಷಧಿಯ ಕುರಿತಾಗಿ ಆದಷ್ಟು ಬೇಗ ವರದಿಯನ್ನು ನೀಡುವಂತೆ ಮನವಿಯನ್ನು ಮಾಡಿದ್ದಾರೆ.
ಗೋವಿಂದಯ್ಯ ಅವರು ಬರುತ್ತಿರುವ ಸಹಸ್ರಾರು ಜನರನ್ನು ನೋಡಿ, ಇಷ್ಟೊಂದು ಔಷಧಿಯನ್ನು ಬೇಗ ಸಿದ್ಧಪಡಿಸುವುದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅವರು ತಾವು ಔಷಧಿಯನ್ನು ಗಿಡಮೂಲಿಕೆಗಳನ್ನು ಬಳಸಿಕೊಂಡು ಸಿದ್ಧಪಡಿಸಿರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಸದ್ಯಕ್ಕೆ ಔಷಧಿ ವಿತರಣೆಯ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಐಸಿಎಂಆರ್ ಈ ಆಯುರ್ವೇದ ಔಷಧೀಯ ಕುರಿತಾಗಿ ಯಾವ ವರದಿಯನ್ನು ನೀಡಲಿದೆ ಎನ್ನುವುದು ಸದ್ಯಕ್ಕೆ ಎಲ್ಲರ ನಿರೀಕ್ಷೆಯಾಗಿದೆ.