ಯಾಣ ಶಿಖರ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ?ಮರೆಯಲ್ಲಿ ಕಾಣದೇ ಇದ್ದ ಇದನ್ನು ಹುಡುಕಿದವರು ಯಾರು?

Written by Anand raj

Published on:

ಸೊಕ್ಕಿದ್ದವರು ಯಾಣಕ್ಕೆ ಹೋಗ್ತಾರೆ ರೊಕ್ಕಿದವರು ಗೋಕರ್ಣಕ್ಕೆ ಹೋಗ್ತಾರೆ ಎಂಬ ನುಡಿಗಟ್ಟಿದೆ.1801ನೇ ಇಸವಿ ಯವರೆಗೆ ಅಜ್ಞಾತವಾಗಿ ಉಳಿದಿದ್ದ ಈ ಜಾಗದ ಬಗ್ಗೆ ಬನ್ನಿ ತಿಳಿಯೋಣ…

ಯಾಣ ಕರ್ನಾಟಕದ ಅತಿ ಸುಂದರ ಜಾಗಗಳಲ್ಲೊಂದು. ಇದು ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಬಳಿಯ ಒತ್ತಾದ ಕಾಡುಗಳ ಮಧ್ಯೆ ಇರುವ ಕರಿಕಲ್ಲಿನ ಶಿಖರಗಳ ಒಂದು ಸುಂದರ ತಪ್ಪಲು.ಇದನ್ನು ಪಶ್ಚಿಮ ಘಟ್ಟಗಳ ಕಿರೀಟ ಅಂತ ಕರೀತಾರೆ.
ಈ ಯಾಣ ಜಗತ್ತಿನ ಅತ್ಯಂತ ತೇವ ಭರಿತ ಪ್ರದೇಶಗಳಲ್ಲಿ ಇದು ಕೂಡ ಒಂದು.ಕರ್ನಾಟಕದ ಅತ್ಯಂತ ಸ್ವಚ್ಛ ಪ್ರದೇಶ ಹಾಗೂ ಭಾರತದಲ್ಲಿ 2ನೇ ಅತ್ಯಂತ ಸ್ವಚ್ಛವಾದ ಹಳ್ಳಿ ಎಂದು ಹೆಸರಾಗಿದೆ .

ಕುಮುಟಾದಿಂದ 31 ಕಿಮೀ ಉತ್ತರ ಈಶಾನ್ಯ ಕ್ಕೆ ಬಂದರೆ ದಟ್ಟವಾದ ಕಾಡಿನ ಮಧ್ಯೆ ತಲೆ ಎತ್ತಿ ನಿಂತಿರುವ 2 ಬೃಹತ್ ಕ್ರಿಸ್ಟಲ್ ಕಲ್ಲಿನ ಶಿಖರಗಳ ಸಾಲು ಕಾಣಿಸುತ್ತದೆ.ಆ ತಾಣವೇ ಯಾಣ.ಒಂದು ಬೃಹತ್ ಭೈರವೇಶ್ವರ ಶಿಖರ ಹಾಗೂ ಇನ್ನೊಂದು ಮೋಹಿನಿ ಶಿಖರ.

ಭೈರವೇಶ್ವರ ಶಿಖರ ಸುಮಾರು 120 ಮೀಟರ್ಗಳಷ್ಟು ಎತ್ತರ ಇದೆ ,ಮೋಹಿನಿ ಶಿಖರ 90 ಮೀಟರುಗಳಷ್ಟು ಎತ್ತರ ಇದೆ.
ಇವುಗಳಿಂದ ಕೊಂಚ ದೂರದಲ್ಲಿ ಅಘನಾಶಿನಿ ನದಿಯ ಹಿನ್ನೀರಿನ ಜಲಪಾತ ಇದೆ.ಈ ಯಾಣ ತನ್ನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭವ್ಯತೆಗೆ ಹೆಸರಾಗಿದೆ.ಈ ಜಾಗದ ಪೌರಾಣಿಕ ಹಿನ್ನೆಲೆಯನ್ನು ಅವಲೋಕಿಸುವುದಾದರೆ ಭಸ್ಮಾಸುರ ಮಹಾ ವಿಷ್ಣುವಿನ ಕುರಿತು ತಪಸ್ಸು ಮಾಡಿ ತಾನು ಯಾರ ತಲೆ ಮೇಲೆ ಕೈ ಇಡುತ್ತಿನೊ ಅವರು ಸುಟ್ಟು ಭಸ್ಮವಾಗಬೇಕು ಅಂತ ಕೇಳಿಕೊಂಡಾಗ ವಿಷ್ಣು ತಥಾಸ್ತು ಅಂತ ಹೇಳ್ತಾನೆ ,ಭಸ್ಮಾಸುರ ಅದನ್ನು ನಿರೂಪಿಸುವುದಕ್ಕೆ ಶಿವನ ಹಿಂದೆ ಬಿದ್ದು ಶಿವನು ತಲೆ ಮೇಲೆ ಕೈ ಇಡೋದಕ್ಕೆ ಮುಂದಾದಾಗ ಹೆದರಿದ ಶಿವ ಕೈಲಾಸದಿಂದ ಓಡಲು ಶುರು ಮಾಡ್ತಾರೆ.

ಮೋಹಿನಿಯ ಪಾಶಕ್ಕೆ ಸಿಲುಕಿದ ಭಸ್ಮಾಸುರ ಮೋಹಿನಿಯನ್ನು ನಿಜವಾದ ಹೆಣ್ಣೆಂದು ಭಾವಿಸಿ ತಬ್ಬಿಕೊಳ್ಳಲು ಮುಂದಾಗ್ತಾನೆ ಆಗ ತನ್ನಂತೆ ನೃತ್ಯ ಮಾಡಲು ಮೋಹಿನಿ ಕೇಳಿಕೊಳ್ಳುತ್ತಾಳೆ ಅದರಂತೆ ಭಸ್ಮಾಸುರ ಮೋಹಿನಿಯ ಭಂಗಿಗಳನ್ನು ಅನುಕರಿಸಿದ
ಮೋಹಿನಿ ನೃತ್ಯದ ನಡುವೆ ತನ್ನ ಕೈಯನ್ನು ತನ್ನ ತಲೆ ಮೇಲೆ ಇಟ್ಕೋತಾಳೆ ಆಗ ಭಸ್ಮಾಸುರ ಕೂಡ ತನ್ನ ಕೈಯನ್ನು ತನ್ನ ತಲೆ ಮೇಲೆ ಇಟ್ಟಾಗ ಕೂಡಲೇ ವರದ ಪ್ರಭಾವದಿಂದ ನಿಂತ ಜಾಗದಲ್ಲೇ ಸುಟ್ಟು ಭಸ್ಮವಾಗುತ್ತಾನೆ.

ಆಗ ಪ್ರತ್ಯಕ್ಷನಾದ ಶಿವ ವಿಷ್ಣುವಿನ ಮಹಾತ್ಮೆಗೆ ತಲೆದೂಗುತ್ತಾನೆ.ಹಾಗೆ ಅಂದು ಶಿವ ಹಾಗೂ ಮೋಹಿನಿಯರು ನಿಂತ ಜಾಗವೇ ಯಾಣ ಅಂತ ಹೇಳಲಾಗುತ್ತದೆ. ಶಿವ ನಿಂತ ಜಾಗಕ್ಕೆ ಇದ್ದ ಭೈರವೇಶ್ವರ ಶಿಖರ ಹಾಗೂ ಮೋಹಿನಿ ನಿಂತ ಜಾಗಕ್ಕೆ ಮೋಹಿನಿ ಶಿಖರ ಅಂತ ಹೆಸರಿಡಲಾಗಿದೆ.

ಭೈರವೇಶ್ವರ ಶಿಖರದ ಕೆಳಗೆ ಒಂದು ಸ್ವಯಂ ಉದ್ಭವ ಲಿಂಗವಿದೆ ಇದು ತನ್ನಿಂತಾನೆ ಉದ್ಭವವಾದ ಲಿಂಗ.ಇದರ ಮೇಲೆಸದಾ ಬೆಟ್ಟದ ಕೊರಕಲಿನಿಂದ ನೀರು ಜಿನುಗುತ್ತ ಇರುತ್ತದೆ.ಆ ನೀರಿನ ಮೂಲ ಎಲ್ಲಿದೆ ಅಂತ ಈವರೆಗೂ ಯಾರಿಗೂ ತಿಳಿದಿಲ್ಲ.ಈ ನೀರಿನ ಕಾರಂಜಿ ಲಿಂಗದ ಮೇಲೆ ಬಿದ್ದು ಪಕ್ಕದ ನೀರಿನ ಜರಿಗಳ ಮೂಲಕ ಹರಿದು ದೂರದ ಅಘನಾಶಿನಿ ನದಿಗೆ ಸೇರುತ್ತೆ.ಈ ಜಾಗದಲ್ಲಿ ಒಂದು ನೀರಿನ ಜಲಪಾತ ಕೂಡ ಇದೆ. ಹಾಗೆ ಈ ಜಾಗ ಸುಮಾರು 1801ನೇ ಇಸವಿವರೆಗೂ ಅಜ್ಞಾತವಾಗಿ ಉಳಿದಿತ್ತು.

ಫ್ರಾನ್ಸಿಸ್ ಹ್ಯಾಮಿಲ್ಟನ್ ಎಂಬ ಒಬ್ಬ ಬ್ರಿಟಿಷ್ ಅಧಿಕಾರಿ ಈ ಜಾಗದ ಸೈಟನ್ನು ಸರ್ವೆ ಮಾಡಲು ಬಂದಾಗ ಅವನ ಕಣ್ಣಿಗೆ ಈ ಶಿಖರಗಳು ಬಿದ್ದಿತ್ತು , ಆತ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸರ್ವೆ ಅಧಿಕಾರಿಯಾಗಿದ್ದವರು.ಅವನ ವರದಿಗಳ ಪ್ರಕಾರ ಆಗ ಇಲ್ಲೆಲ್ಲ ಜನವಸತಿ ಇದ್ದು , ಸುಮಾರು 10,000 ಜನ ಯಾಣದ ಸುತ್ತಮುತ್ತ ವಾಸ ಮಾಡಿದ್ದಾರೆ ಅಂತ ಹೇಳಲಾಗುತ್ತೆ ಕ್ರಮೇಣ ಅವರೆಲ್ಲ ವಿವಿಧೆಡೆಗೆ ಚದುರಿ ಮರೆಯಾದರು ಅಂತ ಹೇಳಲಾಗುತ್ತದೆ.

ಭೌಗೋಳಿಕ ಅಧ್ಯಯನಗಳಿಂದ ಈ ಶಿಖರಗಳು ಲಕ್ಷಾಂತರ ವರ್ಷಗಳ ಹಿಂದೆನೇ ಉದ್ಭವವಾಗಿದೆ.ಈ ಜಾಗದಲ್ಲಿ ಹಿಂದೆ ಜ್ವಾಲಾಮುಖಿಗಳು ಸಂಭವಿಸಿರುವ ಬಗ್ಗೆ ಸಾಕ್ಷಿ ಸಿಕ್ಕಿದೆ.ಈ ಜ್ವಾಲಾಮುಖಿಗಳ ಸ್ಫೋಟದ ಫಲವಾಗಿ ಈ ಬಗೆಯ ಕಲ್ಲುಗಳು ಮೇಲೆದ್ದಿವೆ ಅನ್ನೋದು ತಜ್ಞರ ವಾದ.ಇನ್ನು 1996ರಲ್ಲಿ ಬಿಡುಗಡೆಯಾದ ನಮ್ಮೂರ ಮಂದಾರ ಹೂವೇ ಚಿತ್ರದಲ್ಲಿ ಮೊದಲ ಬಾರಿಗೆ ಈ ಯಾಣದ ಚೆಲುವನ್ನು ತೋರಿಸಲಾಗಿದೆ.ಆಗಿಂದ ಇಲ್ಲಿಗೆ ಪ್ರವಾಸ ಬರುವ ಯಾತ್ರಿಕರ ಸಂಖ್ಯೆ ಹೆಚ್ಚಾಯ್ತು.

ಇವು ಮೊನೊಲಿತಿಕ್ ಯುಗದ ಕಲ್ಲುಗಳು ಅಂತ ಭೂಗೋಳ ತಜ್ಞರು ಸಂಶೋಧಿಸಿದ್ದಾರೆ.2010ರಲ್ಲಿ ಕರ್ನಾಟಕ ಸರ್ಕಾರದ ಸಂರಕ್ಷಣಾ ವಿಭಾಗದ ಆಸ್ತಿಗಳು ಅಂತ ಇವುಗಳನ್ನು ಘೋಷಣೆ ಮಾಡಲಾಗಿದೆ.ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಇವುಗಳನ್ನು ಸೇರಿಸುವ ಬಗ್ಗೆ ಒತ್ತಡ ಬಂದಿದೆಯಾದರೂ ಇನ್ನು ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲ.. ಸಿಗಬಹುದಾ ಎಂದು ಕಾದು ನೋಡಬೇಕು.

ಯಾಣದ ಚೆಲುವು ನಮ್ಮನ್ನು ನಿಂತಲ್ಲೇ ಮಂತ್ರಮುಗ್ಧವಾಗಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.ಬಾನೆತ್ತರಕ್ಕೆ ತಲೆ ಎತ್ತಿ ನಿಂತಿರುವ ಈ ವಿಶಿಷ್ಟ ಕಲ್ಲಿನ ಶಿಖರಗಳು ರಾಜ್ಯದ ಹಾಗೂ ದೇಶದ ಸಾಂಸ್ಕೃತಿಕತೆಯ ಪ್ರತೀಕ ಅಂತ ಹೇಳಬಹುದು.

ಧನ್ಯವಾದಗಳು.

Related Post

Leave a Comment