ನಿಮಗೆ ಕೆಟ್ಟ ಕನಸು ಬೀಳುತ್ತೀದೆಯ ಅಗದರೆ ಈ ಚಿಕ್ಕ ಕೆಲಸ ಮಾಡಿ!

Written by Anand raj

Published on:

ಪ್ರತಿಯೊಬ್ಬರು ದಿನದ ಆಯಾಸವನ್ನು ನಿದ್ರೆ ಮಾಡುವ ಮೂಲಕ ನಿವಾರಿಸಿಕೊಳ್ಳುತ್ತಾರೆ. ಗಾಢವಾದ ನಿದ್ರೆಯು ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡುವುದರ ಜೊತೆಗೆ ಸಾಕಷ್ಟು ಆರೋಗ್ಯ ಸುಧಾರಣೆಯನ್ನು ಮಾಡುತ್ತದೆ. ಯಾರು ಆಳವಾದ ನಿದ್ರೆಯಲ್ಲಿ ಜಾರಿರುತ್ತಾರೆ, ಆಗ ಅವರ ಸುಪ್ತ ಮನಸ್ಸು ಚಾಲನೆ ಪಡೆದುಕೊಳ್ಳುತ್ತದೆ. ಯಾರ ಬಳಿಯೂ ಹೇಳಿಕೊಳ್ಳಲಾಗದ ಸಂಗತಿಗಳು ಕನಸಿನ ರೂಪದಲ್ಲಿ ಅಥವಾ ತಡವರಿಸುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಕೆಲವು ಬಾರಿ ನಾವು ನಿದ್ರೆ ಮಾಡಿದಾಗ ಎಂದೂ ಕಲ್ಪಿಸಿಕೊಳ್ಳದಂತಹ ವಿಷಯಗಳು ಕನಸಿನ ರೂಪದಲ್ಲಿ ಮನಸ್ಸಿನ ಅಂಗಳಕ್ಕೆ ಇಳಿಯುತ್ತವೆ. ಅಂತಹ ಕನಸುಗಳು ವ್ಯಕ್ತಿಗೆ ಭಯವನ್ನು ಅಥವಾ ಸಂತೋಷವನ್ನು ಉಂಟುಮಾಡುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ನಿದ್ರೆಯಲ್ಲಿ ಕಾಣುವ ಕೆಲವು ಕನಸುಗಳು ಭವಿಷ್ಯವನ್ನು ತಿಳಿಸುತ್ತವೆ.

ಕೆಟ್ಟ ಮತ್ತು ಒಳ್ಳೆಯ ಕನಸು

ನಿದ್ರಿಸುವಾಗ ಉಪಪ್ರಜ್ಞೆಯ ಮನಸ್ಸು ನಮ್ಮ ಜೀವನದ ಕೆಲವು ವಿಷಯಗಳನ್ನು ತಿಳಿಸುತ್ತದೆ. ವ್ಯಕ್ತಿ ಕಾಣುವ ಕನಸಿನಲ್ಲಿ ಒಳ್ಳೆಯ ಹಾಗೂ ಕೆಟ್ಟ ಕನಸು ಎನ್ನುವ ಎರಡು ವಿಧಗಳಿರುತ್ತವೆ. ಒಳ್ಳೆಯ ಕನಸುಗಳು ಮನಸ್ಸಿಗೆ ಸಂತೋಷವನ್ನು ನೀಡುವುದರ ಜೊತೆಗೆ ಹೆಚ್ಚು ಚೈತನ್ಯಶೀಲರನ್ನಾಗಿ ಮಾಡುತ್ತವೆ. ಕೆಟ್ಟ ಕನಸುಗಳು ಮಾನಸಿಕವಾಗಿ ಕಿರಿಕಿರಿ, ಗೊಂದಲ ಹಾಗೂ ಬೇಸರವನ್ನು ಉಂಟುಮಾಡುತ್ತವೆ. ಅಲ್ಲದೆ ವ್ಯಕ್ತಿಯ ಆಲೋಚನೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವುದು. ಕೆಟ್ಟ ಕನಸು ನಿದ್ರೆಯಿಂದ ಎಚ್ಚೆತ್ತುಕೊಳ್ಳುವಂತೆ ಮಾಡುವುದರ ಜೊತೆಗೆ ಭವಿಷ್ಯದ ಬಗ್ಗೆ ದೀರ್ಘ ಯೋಚನೆ ಹಾಗೂ ಭಯ ಹುಟ್ಟಿಸುವಂತೆ ಮಾಡುವುದು.

ರಾಹು ಕನಸುಗಳನ್ನು ನಿಯಂತ್ರಿಸುವನು

ವೈದಿಕ ಜ್ಯೋತಿಷ್ಯದ ಪ್ರಕಾರ ರಾಹು ಕನಸುಗಳ ಆಡಳಿತಗಾರ. ರಾಹು ಚಂದ್ರನೊಂದಿಗೆ ಸಂಬಂಧವನ್ನು ಪಡೆದುಕೊಂಡಾಗ ಅಥವಾ ಸಂಪರ್ಕ ಪಡೆದಾಗ ವ್ಯಕ್ತಿ ಹೆಚ್ಚು ಕನಸನ್ನು ಕಾಣುತ್ತಾನೆ. ವ್ಯಕ್ತಿ ನಿದ್ರೆ ಮಾಡಿದಾಗ ಕನಸು ಕಾಣುವುದು ಸಾಮಾನ್ಯವಾದ ಪ್ರಕ್ರಿಯೆ. ಅದೇ ರೀತಿ ಕೆಲವರು ಎಚ್ಚರವಿದ್ದಾಗ ಮತ್ತು ಹಗಲಲ್ಲೂ ಕನಸು ಕಾಣುತ್ತಾರೆ. ಕನಸು ಎನ್ನುವುದು ಮೂಲತಃ ನಮ್ಮ ಮನಸ್ಸಿನ ಆಲೋಚನೆಗಳನ್ನು ಅವಲಂಬಿಸಿರುತ್ತದೆ. ಮನಸ್ಸಿಗೆ ಸಂಬಂಧಿಸಿದ ಈ ಕನಸುಗಳನ್ನು ರಾಹು ಗ್ರಹವು ನಮ್ಮನ್ನು ಆಳುತ್ತದೆ. ಜೊತೆಗೆ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾನೆ ಎಂದು ಹೇಳಲಾಗುವುದು.

ಮನೆಯ ವಾಸ್ತು ಪ್ರಬಲವಾಗಿರಲು ಯಾವ ದಿಕ್ಕಿನಲ್ಲಿ ಏನೇನಿರಬೇಕು ಗೊತ್ತಾ?

ಕುಂಡಲಿಯಲ್ಲಿ ಕನಸಿನ ಮನೆ

ವ್ಯಕ್ತಿಯ ಹುಟ್ಟಿದ ಸಮಯಕ್ಕೆ ಅನುಗುಣವಾಗಿ ಕುಂಡಲಿಯನ್ನು ಹೊಂದಿರುತ್ತಾನೆ. ಆ ಕುಂಡಲಿಯಲ್ಲಿ ಇರುವ 9ನೇ ಮನೆಯು ಕನಸಿಗೆ ಸಂಬಂಧಿಸಿದ ಮನೆ ಎಂದು ಹೇಳಲಾಗುವುದು. ಒಂಬತ್ತನೇ ಮನೆಯಲ್ಲಿ ಯಾರು ಉತ್ತಮ ಗ್ರಹಗಳನ್ನು ಅಥವಾ ಅನುಕೂಲಕರವಾದ ಗ್ರಹಗಳನ್ನು ಹೊಂದಿರುತ್ತಾರೆ, ಅವರು ಉತ್ತಮ ಕನಸುಗಳನ್ನು ಕಾಣುತ್ತಾರೆ. ಯಾರು ದುರ್ಬಲ ಗ್ರಹಗಳನ್ನು ಹೊಂದಿರುತ್ತಾರೆ ಅವರು ಸಾಕಷ್ಟು ಕೆಟ್ಟ ಕನಸುಗಳು ಹಾಗೂ ಕೆಟ್ಟ ಚಿಂತನೆಗಳನ್ನೇ ಮೊದಲು ಮಾಡುತ್ತಾರೆ. ಅದು ಅವರಿಗೆ ಬೇಸರ ಹಾಗೂ ಗೊಂದಲವನ್ನು ಉಂಟುಮಾಡುವುದು. ವಿಚಿತ್ರ ಆಲೋಚನೆಗಳು ಮನಸ್ಸನ್ನು ಕಾಡುತ್ತವೆ. ಕುಂಡಲಿಯ ಐದನೇ ಮನೆಯಲ್ಲಿ ಬುಧನಿದ್ದರೆ ಸಂತಾನ, ವಿನೋದ, ಪ್ರಣಯ ಮತ್ತು ಸೃಜನಶಿಲ ಸಂಗತಿಗಳ ಬಗ್ಗೆ ಹೆಚ್ಚು ಕನಸನ್ನು ಕಾಣುತ್ತಾರೆ. ಅದೇ ಬುಧನು ಆರನೇ ಮನೆಯಲ್ಲಿ ಇದ್ದರೆ ನಿಷ್ಪ್ರಯೋಜಕ ಮತ್ತು ಕೃತಜ್ಞತೆ ಇಲ್ಲದ ಕೆಲಸವನ್ನು ಮಾಡುವುದರ ಬಗ್ಗೆ ಹೆಚ್ಚು ಚಿಂತನೆ ಹಾಗೂ ಕನಸುಗಳನ್ನು ಕಾಣುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

ಕೆಟ್ಟ ಕನಸುಗಳ ನಿವಾರಣೆಗೆ ಪರಿಹಾರ ಕ್ರಮ

ಕೆಟ್ಟ ಕನಸುಗಳು ನಮ್ಮ ಕುಂಡಲಿ, ಗ್ರಹಗಳು, ಸುಪ್ತ ಮನಸ್ಸು ಹಾಗೂ ಚಿಂತನೆಗಳಿಂದ ಕೂಡಿರುತ್ತವೆ ನಿಜ. ಆದರೆ ಜ್ಯೋತಿಷ್ಯ ಶಾಸ್ತ್ರಗಳ ಅನ್ವಯದಂತೆ ಕೆಲವು ನಿಯಮಗಳನ್ನು ಅನುಸರಿಸಿದರೆ ಕೆಟ್ಟ ಕನಸುಗಳಿಂದ ಪಾರಾಗಬಹುದು. ಅಂತಹ ಕನಸುಗಳಿಂದ ಮನಸ್ಸಿಗೆ ಉಂಟಾಗುವ ನೋವು ಹಾಗೂ ಆತಂಕವನ್ನು ಕಡಿಮೆ ಮಾಡಬಹುದು. ಇದರೊಂದಿಗೆ ನಿತ್ಯವೂ ಆರಾಮದಾಯಕ ಹಾಗೂ ಸುದೀರ್ಘ ನಿದ್ರೆಯನ್ನು ಹೊಂದಿ, ಸಾಕಷ್ಟು ವಿಶ್ರಾಂತಿಯನ್ನು ಪಡೆಯಬಹುದು ಎಂದು ಹೇಳಲಾಗುವುದು. ನೀವು ಸಹ ಕೆಟ್ಟ ಕನಸುಗಳಿಂದ ನಿದ್ರಾ ಭಂಗವನ್ನು ಅನುಭವಿಸುತ್ತಿದ್ದೀರಿ ಅಥವಾ ಮಾನಸಿಕವಾಗಿ ಸಾಕಷ್ಟು ಭಯ ಉಂಟಾಗುತ್ತಿದೆ ಎಂದಾದರೆ ಈ ಮುಂದೆ ವಿವರಿಸಲಾದ ಪರಿಹಾರ ಕ್ರಮವನ್ನು ಅನುಸರಿಸಿ, ಸಮಸ್ಯೆಯಿಂದ ದೂರ ಉಳಿಯಿರಿ.

ಉಪ್ಪು ನೀರಿನಿಂದ ನೆಲ ಸ್ವಚ್ಛ ಮಾಡಿ

ಕೆಟ್ಟ ಕನಸುಗಳಿಂದ ಮುಕ್ತಿ ಹೊಂದಲು ಸುಲಭವಾದ ವಿಧಾನ ಎಂದರೆ ಉಪ್ಪಿನ ನೀರಿನಿಂದ ನೆಲವನ್ನು ಒರೆಸುವುದು. ಮಲಗುವ ಮುನ್ನ ನೆಲವನ್ನು ಉಪ್ಪಿನ ನೀರಿನಲ್ಲಿ ಅಥವಾ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ನೆಲ ಒರೆಸಿದರೆ ಉತ್ತಮ ಶಕ್ತಿಯ ಆಗಮನವಾಗುವುದು. ಕೆಟ್ಟ ಚಿಂತನೆಗಳು ಹಾಗೂ ಯೋಚನೆಗಳು ದೂರವಾಗುತ್ತವೆ. ನಿದ್ರಿಸುವಾಗ ಯಾವುದೇ ಅಡೆ- ತಡೆ ಉಂಟಾಗದು ಎಂದು ಹೇಳಲಾಗುತ್ತದೆ.

ಕಾಲನ್ನು ತೊಳೆಯುವುದು

ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲನ್ನು ತೊಳೆಯಬೇಕು. ಇದರಿಂದ ಕೀಟಾಣು ಹಾಗೂ ಧೂಳಿನ ಕಣಗಳು ಪಾದಗಳಿಂದ ಮತ್ತು ನಮ್ಮ ದೇಹದಿಂದ ದೂರ ಉಳಿಯುತ್ತವೆ. ಆಗ ಧನಾತ್ಮಕ ಶಕ್ತಿಯ ಹರಿವು ನಮ್ಮ ಸುತ್ತ ಹೆಚ್ಚುವುದು. ಆರೋಗ್ಯಕರ ನಿದ್ರೆಯು ಬರುವುದು. ಕೆಲವು ನಂಬಿಕೆಗಳ ಪ್ರಕಾರ ತೆಂಗಿನ ನೀರನ್ನು ಮಲಗುವ ಮುನ್ನ ಹಣೆಯ ಭಾಗಕ್ಕೆ ಅನ್ವಯಿಸಿ ಮಲಗಬೇಕು. ಅದು ಮಾನಸಿಕವಾಗಿ ತೊಂದರೆಯನ್ನುಂಟುಮಾಡುವ ಕೆಟ್ಟ ಕನಸು ಕಾಣದಂತೆ ಮಾಡುವುದು.

ಪವಿತ್ರ ವಸ್ತುಗಳನ್ನು ಇಡುವುದು

ಮಲಗುವ ಮೊದಲು ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ದಿಂಬಿನ ಕೆಳಗೆ ಇಡಬೇಕು. ಒಂದು ಬಿಳಿ ಬಟ್ಟೆಯಲ್ಲಿ ಸ್ವಲ್ಪ ಸೋಂಪಿನ ಕಾಳನ್ನು ಸೇರಿಸಿ, ಸುತ್ತಿ ಹಾಸಿಗೆ ಅಥವಾ ದಿಂಬಿನ ಕೆಳಭಾಗದಲ್ಲಿ ಇಡಬೇಕು. ಹಳದಿ ಅಕ್ಕಿಯನ್ನು ಅಥವಾ ಅಕ್ಷತೆಯ ಒಂದು ಪೊಟ್ಟಣವನ್ನು ದಿಂಬು ಅಥವಾ ಹಾಸಿಗೆಯ ಕೆಳಭಾಗದಲ್ಲಿ ಇಡಬೇಕು. ಇವು ರೋಗಾಣು ಹಾಗೂ ಋಣಾತ್ಮಕ ಶಕ್ತಿಯನ್ನು ದೂರ ಇರುವಂತೆ ಮಾಡುತ್ತವೆ. ಆರೋಗ್ಯಕರ ನಿದ್ರೆ ಹಾಗೂ ದುಃಸ್ವಪ್ನಗಳಿಂದ ಮುಕ್ತಿಯನ್ನು ನೀಡುವುದು.ಪಟಕವನ್ನು ಒಂದು ಬಟ್ಟೆ ಅಥವಾ ಪೊಟ್ಟಣದಲ್ಲಿ ಇರಿಸಿ, ಹಾಸಿಗೆಯ ಬಳಿ ಇಟ್ಟು ಮಲಗಬೇಕು. ಒಂದು ವಾರದ ಬಳಿಕ ಅದನ್ನು ಸುಟ್ಟುಹಾಕಬೇಕು. ಹೀಗೆ ಮಾಡುವುದರಿಂದ ಕೆಟ್ಟ ಸ್ವಪ್ನಗಳಿಂದ ಮುಕ್ತಿ ಪಡೆಯಬಹುದು.

ವಾಸ್ತು ಶಾಸ್ತ್ರದ ಪರಿಹಾರ ಮಾರ್ಗ

ಮಲಗುವಾಗ ಯಾವಾಗಲೂ ನಮ್ಮ ತಲೆಯು ದಕ್ಷಿಣ ದಿಕ್ಕಿಗೆ ಕಾಲು ಉತ್ತರ ದಿಕ್ಕಿಗೆ ಇರುವಂತೆ ಮಲಗಬೇಕು. ಮಲಗುವ ಜಾಗದಲ್ಲಿ ಅಥವಾ ಹತ್ತಿರದಲ್ಲಿ ಪಾದರಕ್ಷೆಗಳು ಇರಬಾರದು. ಪ್ರತಿದಿನ ಮುಂಜಾನೆ ಉತ್ತಮ ಆರಂಭವನ್ನು ಹೊಂದಬೇಕು. ಅದಕ್ಕಾಗಿ ಹೂವಿನ ಗಿಡ ಅಥವಾ ಯಾವುದೇ ಸಸ್ಯಗಳಿಗೆ ಮೊದಲು ನೀರನ್ನು ಎರೆಯಿರಿ. ಅದು ಮಾನಸಿಕವಾಗಿ ನಿರಾಳತೆ ಹಾಗೂ ಉತ್ತಮ ಆರಂಭವನ್ನು ನೀಡುವುದು. ಮಲಗುವ ಮುನ್ನ ಕೂದಲುಗಳನ್ನು ಸರಿಯಾಗಿ ಬಾಚಿಕೊಳ್ಳಬೇಕು. ಉದ್ದ ಕೂದಲನ್ನು ಬಿಚ್ಚಿ ಮಲಗಿದರೆ ನಕಾರಾತ್ಮಕ ಶಕ್ತಿ ಆಕರ್ಷಣೆಗೆ ಒಳಗಾಗುವುದು. ಹಾಗಾಗಿ ಕೂದಲನ್ನು ಸರಿಯಾಗಿ ಕಟ್ಟಿಕೊಳ್ಳಬೇಕು. ಮಲಗುವ ಸ್ಥಳಗಳಲ್ಲಿ ಕಿಟಕಿಗಳು ಅಥವಾ ತೆರೆದ ಪ್ರದೇಶಗಳು ಇದ್ದರೆ ಅವುಗಳನ್ನು ಬಟ್ಟೆಗಳಿಂದ ಮುಚ್ಚಿರಬೇಕು. ಜೊತೆಗೆ ಮಲಗುವ ಪ್ರದೇಶದಲ್ಲಿ ಅಥವಾ ಕೋಣೆಯಲ್ಲಿ ನೀರು ತುಂಬಿದ ತಾಮ್ರದ ಪಾತ್ರೆಯನ್ನು ಬಿಳಿ ಬಟ್ಟೆಯಲ್ಲಿ ಮುಚ್ಚಿ ಇಡಬೇಕು. ಈ ವಿಧಾನಗಳು ಸಾಕಷ್ಟು ದೋಷ ಹಾಗೂ ನಕಾರಾತ್ಮಕ ಶಕ್ತಿಯನ್ನು ದೂರ ತಳ್ಳುತ್ತವೆ. ಉತ್ತಮ ನಿದ್ರೆ ಹಾಗೂ ಕನಸುಗಳಿಗೆ ಪ್ರೇರೇಪಿಸುತ್ತವೆ.

ನವದಂಪತಿಗಳ ಸುಖಸಂಸಾರಕ್ಕೆ ವಾಸ್ತು ಸಲಹೆಗಳು ಇಲ್ಲಿದೆ ನೋಡಿ..
ಈ ಪರಿಣಾಮಕಾರಿ ಪವಿತ್ರ ಮಂತ್ರಗಳನ್ನು ಪಟ್ಟಿಸಿ

ದೇವರಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಿದರೆ ಸದಾ ಕಾಲ ಉತ್ತಮ ಫಲ ಹಾಗೂ ಸಂಗತಿಗಳೇ ಸಂಭವಿಸುತ್ತವೆ. ಹಾಗಾಗಿ ಮಲಗುವ ಮುನ್ನ ಕೈಕಾಲುಗಳನ್ನು ತೊಳೆದು ಕೆಲವು ದೇವತೆಗಳ ಮಂತ್ರವನ್ನು ಪಠಿಸಬೇಕು. ಆಗ ಉತ್ತಮ ನಿದ್ರೆ ಹಾಗೂ ಕೆಟ್ಟ ಸ್ವಪ್ನಗಳಿಂದ ಮುಕ್ತಿ ದೊರೆಯುವುದು.

  • ದುರ್ಗಾ ಮಂತ್ರ:  “ಯಾ ದೇವಿ ಸರ್ವ ಭೂತೇಶು ನಿದ್ರಾ ರೂಪೇಣ ಸಮಸ್ಥಿತಾ, ನಮಃಸ್ತಸ್ಯೈ ನಮಸ್ತಸ್ಯೈ ನಮೋ ನಮಃ”
    ನರಸಿಂಹ ಮಂತ್ರ:”ಓಂ ಹಮ್ ಘಟ್ ನರಸಿಂಹ ಸ್ವಾಹಾ”
  • ಹನುಮಾನ್ ಮಂತ್ರ: ” ರಾಮಸ್ಕಂದಮ್ ಹನುಮಂತಮ್, ವೈನತೇಯಂ ವೃಕೋದರಂ ಶಯನಾಯ ಸ್ಮರೇ ನಿತ್ಯಂ, ದುಸ್ವಪ್ನಾ ತಸ್ಯ ನಾಶ್ಯತಿ.”

ಈ ಶಕ್ತಿಶಾಲಿ ದೇವತೆಗಳ ಮಂತ್ರಗಳನ್ನು ನಿದ್ರೆ ಮಾಡುವ ಮುನ್ನ ಹೇಳುವುದರಿಂದ ಮಾನಸಿಕವಾಗಿ ಧೈರ್ಯ, ನಿರಾಳತೆ ಹಾಗೂ ಉತ್ತಮ ನಿದ್ರೆ ದೊರೆಯುವುದು. ಜೊತೆಗೆ ಕೆಟ್ಟ ಸ್ವಪ್ನಗಳಿಂದ ಸುಲಭವಾಗಿ ಮುಕ್ತಿ ಹೊಂದಬಹುದು.

Related Post

Leave a Comment