ಬಾಣಂತಿ ಮಗು ಬೇಸಿಗೆಯಲ್ಲಿ ಫ್ಯಾನ್ ಬಳಸಬಹುದೇ!

Written by Anand raj

Published on:

ಹಸಿಮೈ ಬಾಣಂತಿಯರಿಗೆ ಬೆಚ್ಚನೆಯ ಕೋಣೆ ಬೇಕು. ಆದರೆ 44 ಡಿಗ್ರಿ ಸೆಲ್ಸಿಯಸ್ ತಲುಪಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಬಿಸಿಲು ಅವರನ್ನು ಬೇಯಿಸುತ್ತಿದೆ. ಹೀಗಾಗಿ ಬಾಣಂತಿಯರೂ ಕೂಲರ್‌ಗಳಿಗೆ ಮೊರೆ ಹೋಗುತ್ತಿದ್ದಾರೆ.

ಹೆರಿಗೆ ನಂತರ ನವಜಾತ ಶಿಶು ಹಾಗೂ ಬಾಣಂತಿಯನ್ನು ಸೂಕ್ಷ್ಮಾಣು ಜೀವಿಗಳಿಂದ ರಕ್ಷಿಸಲು ಬೆಚ್ಚನೆಯ ವಾತಾವರಣದ ಸೃಷ್ಟಿಸಲಾಗುತ್ತದೆ. ಎಣ್ಣೆ ಸ್ನಾನದ ನಂತರ ಬಾಣಂತಿ ಅಗ್ಗಿಷ್ಟಿಕೆಯ (ಮಣ್ಣಿನ ಮಡಿಕೆಯನ್ನು ಅರ್ಧ ಚಂದ್ರಾಕಾರದಲ್ಲಿ ಒಡೆದು ಅದರಲ್ಲಿ ಇದ್ದಿಲು ಬೆಂಕಿ ಹಾಕಿ ಕಾವು ಪಡೆಯುವ ಸಾಂಪ್ರದಾಯಿಕ ಸಾಧನ) ಕಾವು ಪಡೆಯುವುದು ಅನಿವಾರ್ಯ. ಬಾಣಂತಿಯ ಕೋಣೆಯನ್ನು ಸದಾ ಬೆಚ್ಚಗಿರಿಸಲು ಇದನ್ನು ಸದಾಕಾಲ ಅಲ್ಲಿ ಇರಿಸಲಾಗುತ್ತದೆ. ಈ ಬಾರಿಯ ಬಿಸಿಲು ಅದನ್ನೆಲ್ಲ ತಿರುವುಮುರುವು ಮಾಡಿದೆ.

ಸಹಿಸಲಾಗದಷ್ಟು ಸೆಖೆ ಕಾಡುತ್ತಿರುವುದರಿಂದ ಯಾರೂ ಬಾಣಂತಿಯರಿಗೆ ಅಗ್ಗಿಷ್ಟಿಕೆ ಇಡುತ್ತಿಲ್ಲ. ಬದಲಾಗಿ ಕೂಲರ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಹಸಿ ಮೈ ಇದ್ದರೂ, ತಾನಿದ್ದ ಸ್ಥಿತಿಯಲ್ಲಿ ಇದು ಮಾರಕ ಎಂದು ತಿಳಿದಿದ್ದರೂ ಸೆಖೆಯಿಂದ ರಕ್ಷಣೆ ಪಡೆಯಲು ಕೂಲರ್ ಅನಿವಾರ್ಯವಾಗುತ್ತಿದೆ. ಕೆಲವರು ಫ್ಯಾನ್ ಬಳಸುತ್ತಿದ್ದಾರೆ.

ಮನೆ ಒಳಗಿನ ತಾಪಮಾನ 26-30 ಡಿಗ್ರಿ ಸೆಲ್ಸಿಯಸ್ ಇದ್ದರೆ ಬಾಣಂತಿ-ನವಜಾತ ಶಿಶುವಿನ ಆರೋಗ್ಯಕ್ಕೆ ಉತ್ತಮ. ಆದರೆ ಈಗ ತಾಪಮಾನ 44 ಡಿ.ಸೆ. ದಾಟುತ್ತಿದೆ. ಮನೆ ಒಳಗಿನ ಉಷ್ಣತೆ ಊಹಿಸಲೂ ಆಗದು. ನವಜಾತ ಶಿಶುಗಳು ಸೆಖೆಗೆ ಮಲಗಿದಲ್ಲಿಯೇ ಬಸವಳಿಯುತ್ತಿವೆ. ಎಳೆಯ ಮೈ ಮೇಲೆ ಬಾಸುಂಡೆ ಮಾದರಿಯ ಕೆಂಪು ಕೆಂಪು ಗುಳ್ಳೆಗಳು (ಬೆವರ ಸಾಲೆ) ಕಾಣಿಸಿಕೊಳ್ಳುತ್ತಿವೆ. ಅವುಗಳಿಗೂ ಫ್ಯಾನ್/ಕೂಲರ್ ಅನಿವಾರ‌್ಯ ಎನ್ನುವಂತಾಗಿದೆ. ಆದರೆ, ಶಿಶುವಿನ ಆರೋಗ್ಯಕ್ಕೆ ಈ ತಣ್ಣನೆ ಗಾಳಿ ಸೂಕ್ತವಲ್ಲ. ಹಾಗಾಗಿ ಬಹುತೇಕ ಬಾಣಂತಿಯರು ಶಿಶುವಿನ ಮೈ ಮೇಲೆ ತಣ್ಣನೆಯ ಬಟ್ಟೆ ಹಾಕುತ್ತಿದ್ದಾರೆ. ಅದಲ್ಲದೆ ಬಾಣಂತಿ, ಶಿಶುಗಳನ್ನು ನಿರ್ಜಲೀಕರಣ ಬಾಧಿಸುತ್ತಿದೆ. ಮೂತ್ರ ವಿಸರ್ಜನೆ ಆಗದೆ ನರಳುವಂತಾಗಿದೆ.

ಬಾಣಂತಿಯರಿಗೆ ಬಿಸಿ ನೀರಿನ ಸ್ನಾನ, ಬೆಂಕಿ ಕಾಯಿಸಿಕೊಳ್ಳುವುದು ಅಗತ್ಯ. ಆದರೆ ಸೆಖೆ ಹೆಚ್ಚಿರುವುದರಿಂದ ಈಗ ಅದರ ಅಗತ್ಯವಿಲ್ಲ. ಬಾಣಂತಿ ಹೆಚ್ಚಾಗಿ ತರಕಾರಿ, ಎಳನೀರು, ನೀರು ಸೇವಿಸಬೇಕು. ಬಾಣಂತಿ ಹೆಚ್ಚು ನೀರು ಕುಡಿದರೆ ಮಕ್ಕಳಿಗೆ ಹೊಟ್ಟೆ ನೋವು ಬರುತ್ತದೆ ಎಂಬುದು ತಪ್ಪು ಕಲ್ಪನೆ. ಹೆಚ್ಚು ನೀರು ಸೇವನೆಯಿಂದ ಎದೆಹಾಲು ಪ್ರಮಾಣ ಹೆಚ್ಚುತ್ತದೆ. ಶಿಶುವೂ ಆರೋಗ್ಯವಾಗಿರುತ್ತದೆ.

ಶಿಶುಗಳಿಗೆ ನೇರವಾಗಿ ಕೂಲರ್ ಗಾಳಿ ಸೂಕ್ತವಲ್ಲ. ಬೇಕಿದ್ದರೆ ದೂರದಲ್ಲಿಡಬಹುದು. ದಿನವೆಲ್ಲ ಒದ್ದೆ ಬಟ್ಟೆಯಲ್ಲಿಡುವುದರಿಂದ ಶಿಶುವಿನ ದೇಹ ಉಷ್ಣತೆ ಕಳೆದುಕೊಳ್ಳಬಹುದು. ಒದ್ದೆ ಬಟ್ಟೆ ಬಳಕೆ ಬೇಡ. ತೀರ ಬಿಸಿಯೆನಿಸಿದರೆ ಒದ್ದೆ ಬಟ್ಟೆಯಿಂದ ಒಂದೆರಡು ಬಾರಿ ಒರೆಸಬಹುದು. ಎಣ್ಣೆ ಸ್ನಾನಕ್ಕೆ ಸುಡುವ ನೀರು ಬೇಡ, ಬೆಚ್ಚಗಿದ್ದರೆ ಸಾಕು.

Related Post

Leave a Comment