ಕಾಡಿನ ಮಧ್ಯೆ ಇರುವ ಒಂದಷ್ಟು ಮೂಲಿಕೆಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಆಸ್ಪತ್ರೆಗಳಿಗೆ ತೆರಳಿದರೂ ಕಡಿಮೆಯಾಗದ ಒಂದಷ್ಟು ಆರೋಗ್ಯ ಸಮಸ್ಯೆಗಳಿಗೆ ಮೂಲಿಕೆಗಳು ಪರಿಹಾರ ನೀಡುತ್ತವೆ. ಕೆಲವೊಮ್ಮೆ ಆ ರೀತಿಯ ಮೂಲಿಕೆಗಳು ನಮ್ಮ ಮನೆಯ ಬಳಿಯೇ ಇದ್ದರೂ ನಮ್ಮ ಗಮನಕ್ಕೆ ಬಾರದೆ ಮೂಲೆಗುಂಪಾಗುತ್ತದೆ. ಅಂತಹ ಅನೇಕ ಗಿಡಮೂಲಿಕೆಗಳಲ್ಲಿ ಸೊಗದೆ ಬೇರು ಕೂಡ ಒಂದು.
ಈ ಸೊಗದೆ ಬೇರು ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಬೆಟ್ಟ, ಗುಡ್ಡಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಳೆಗಾಲದ ಆರಂಭ ಇದರ ಬಳಕೆಗೆ ಪ್ರಶಸ್ತ ಕಾಲವಾಗಿದೆ. ಇದರ ಬೇರನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ.ಮಾರುಕಟ್ಟೆಯಲ್ಲಿ ಈ ಸೊಗದೆ ಬೇರಿನ ಸಿರಪ್ ಸಿಗುತ್ತದೆ. ಹೀಗಾಗಿ ಆರಾಮದಲ್ಲಿ ಈ ಸಿರಪ್ನ್ನು ಮನೆಗೆ ತಂದು ಜ್ಯೂಸ್ ಮಾಡಿ ಕುಡಿದು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಹಾಗಾದರೆ ಈ ಸೊಗದೆ ಬೇರು ಯಾವೆಲ್ಲಾ ರೀತಿಯ ಆರೋಗ್ಯ ವೃದ್ಧಿಸುವ ಗುಣವನ್ನು ಹೊಂದಿದೆ ಎನ್ನುವ ಬಗ್ಗೆ ತಿಳಿದುಕೊಳ್ಳಿ ಇಲ್ಲಿದೆ ನೋಡಿ ಮಾಹಿತಿ.
ಪಿತ್ತ ನಿವಾರಕವಾಗಿದೆ
ಆಹಾರದಲ್ಲಿನ ವ್ಯತ್ಯಾಸ, ನಿದ್ದೆಗೆಡುವುದು ಹೀಗೆ ಹಲವು ಕಾರಣಗಳಿಂದ ದೇಹದಲ್ಲಿ ಪಿತ್ತ ಉಂಟಾಗುತ್ತದೆ. ಇದಕ್ಕೆ ಸೊಗದೆ ಬೇರು ಬಹುಬೇಗನೆ ಪರಿಹಾರ ನೀಡುತ್ತದೆ. ಸೊಗದೆ ಬೇರಿನ ಕಷಾಯ ಸೇವಿಸಿದರೆ ಒಂದೆರಡು ದಿನಗಳಲ್ಲಿ ಪಿತ್ತ ಶಮನವಾಗುತ್ತದೆ.ಸೊಗದೆ ಬೇರನ್ನು ಜಜ್ಜಿಕೊಂಡು ನೀರಿಗೆ ಹಾಕಿ ಚೆನ್ನಾಗಿ ಹಾಕಿ ಕುದಿಸಿ ಅದಕ್ಕೆ ಬೆಲ್ಲ , ಲಿಂಬುರಸ ಸೇರಿಸಿ ಸೇವಿಸಿದರೆ ಪಿತ್ತವನ್ನು ಕಡಿಮೆ ಮಾಡಬಹುದಾಗಿದೆ.ರಕ್ತಶುದ್ಧಿಯನ್ನು ಈ ಸೊಗದೆ ಮಾಡುತ್ತದೆ. ರಕ್ತದಲ್ಲಿನ ಕ್ರಿಮಿ ಕೀಟಗಳನ್ನು ನಾಶ ಪಡಿಸಿ ಚರ್ಮದ ಕಾಯಿಲೆಗಳಾದ ದದ್ದು, ಅಲರ್ಜಿ, ಪಿತ್ತದ ಗುಳ್ಳೆಗಳನ್ನು ನಿವಾರಿಸುತ್ತದೆ.
ತಾಯಂದಿರ ಎದೆ ಹಾಲು ಹೆಚ್ಚಿಸುತ್ತದೆ
ಕೆಲವು ಬಾಣಂತಿಯರಲ್ಲಿ ತಿಂಗಾಳದರೂ ಎದೆಹಾಲು ಸರಿಯಾಗಿ ಉತ್ಪತ್ತಿಯಾಗಿರುವುದಿಲ್ಲ. ಇದಕ್ಕೆ ಸೊಗದೆ ಬೇರು ಉತ್ತಮ ಮನೆಮದ್ದಾಗಿದೆ. ಸೊಗದೆ ಬೇರನ್ನು ನೀಡಿದರೆ ಹಾಲಿನ ಉತ್ಪತ್ತಿಯಾಗುತ್ತದೆ. ಜೊತೆಗೆ ಎದೆಹಾಲಿನ ದೋಷವಿದ್ದರೆ ನಿವಾರಣೆಯಾಗಿ ಹಾಲು ಕೂಡ ಶುದ್ಧವಾಗುತ್ತದೆ.ಸೊಗದೆ ಬೇರಿನ ಪುಡಿಯನ್ನು ಅಥವಾ ಚೂರ್ಣವನ್ನು ಆಕಳ ಹಾಲಿನಲ್ಲಿ ಬೆರೆಸಿ ಬಾಣಂತಿಯರಿಗೆ ನೀಡಬೇಕು. ಆದಷ್ಟು ಹಸಿ ಹಾಲಿನಲ್ಲಿ, ಖಾಲಿ ಹೊಟ್ಟೆಯಲ್ಲಿ ನೀಡುವುದು ಒಳ್ಳೆಯದು. ಆಯುರ್ವೇದದಲ್ಲಿಯೂ ಎದೆಹಾಲಿನ ಉತ್ಪತ್ತಿಗೆ ಸೊಗದೆ ಬೇರನ್ನು ಬಳಸಲಾಗುತ್ತದೆ.
ಉರಿಮೂತ್ರ ಸಮಸ್ಯೆಗೆ ಪರಿಹಾರ
ಸಾಮಾನ್ಯವಾಗಿ ದೇಹ ಉಷ್ಣತೆಯಿಂದ ಕೂಡಿದ್ದರೆ ಬೇಸಿಗೆಯ ಸಮಯದಲ್ಲಿ ಉರಿಮೂತ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸೊಗದೆ ಬೇರು ಪರಿಹಾರ ನೀಡುತ್ತದೆ.ಉರಿಮೂತ್ರ ಉಂಟಾದರೆ ಇದರ ಚೂರ್ಣವನ್ನು 3 ರಿಂದ 6 ಗ್ರಾಂನಷ್ಟು ತೆಗೆದುಕೊಂಡು ಎಳನೀರು ಅಥವಾ ಹಾಲಿನಲ್ಲಿ ಸೇರಿಸಿ ಕುಡಿದರೆ ದೇಹ ತಂಪಾಗಿ ಉರಿಮೂತ್ರದ ಸಮಸ್ಯೆ ನಿವಾರಣೆಯಾಗುತ್ತದೆ.ಅತಿಯಾದ ಬಾಯಾರಿಕೆಯಾದರೂ ಈ ಸೊಗದೆ ಬೇರಿನ ಕಷಾಯ ಮಾಡಿ ಸೇವಿಸಬಹುದು. ಇದರಿಂದ ದೇಹದಲ್ಲಿನ ಅನುಪಯುಕ್ತ ವಸ್ತುಗಳು ಮೂತ್ರದಲ್ಲಿ ಹೋರಹೋಗುವಂತೆ ಇದು ಮಾಡುತ್ತದೆ. ನಿಶ್ಯಕ್ತಿ ನಿವಾರಣೆಯಾಗುತ್ತದೆ.
ಬಾಯಿಹುಣ್ಣಿಗೂ ಪರಿಹಾರ
ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಅಥವಾ ಪಿತ್ತವಾಗಿದ್ದರೆ ಬಾಯಿಯಲ್ಲಿ ಹುಣ್ಣುಗಳಾಗುತ್ತವೆ. ಅಗಾಧ ನೋವು, ಹಿಂಸೆಯನ್ನು ನೀಡುವ ಹುಣ್ಣುಗಳನ್ನು ಗುಣವಾಗಿಸಲು ಸೊಗದೆ ಬೇರು ಉತ್ತಮ ಮನೆಮದ್ದಾಗಿದೆ..ಮಂಡಿಯೂತಕ್ಕೆ ಕೂಡ ಈ ಸೊಗದೆ ಬೇರಿನಿಂದ ಪರಿಹಾರ ಸಿಗುತ್ತದೆ. ಸೊಗದೆ ಬೇರಿನ ಪುಡಿಯನ್ನು ನೀರಿನಲ್ಲಿ ಕಲಸಿ ಹಚ್ಚಿದರೆ ಮಂಡಿಯೂತ ಮತ್ತು ನೋವು ಕೆಲವು ದಿನಗಳಲ್ಲಿ ನಿವಾರಣೆಯಾಗುತ್ತದೆ.
ವೀರ್ಯ ವೃದ್ಧಿಗೆ ಸಹಕಾರಿಯಾಗಿದೆ
ಈ ಸೊಗದೆ ಬೇರುಗಳನ್ನು ನೆರಳಿನಲ್ಲಿ ಒಣಗಿಸಿ ನಂತರ ಪುಡಿ ಮಾಡಿ ಇಟ್ಟುಕೊಂಡು ಪ್ರತಿದಿನ ಈ ಚೂರ್ಣವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ವೀರ್ಯವೃದ್ಧಿಗೆ ಸಹಕಾರಿಯಾಗಿದೆ. ದೇಹದ ಉಷ್ಣತೆಯನ್ನು ಹೊರಹಾಕಲು ಕೂಡ ಈ ಸೊಗದೆ ಬೇರು ನೆರವಾಗುತ್ತದೆ.ಇದನ್ನು ಕನ್ನಡದಲ್ಲಿ ಹಾಲುಬಳ್ಳಿ ಬೇರು, ಸುಗಂಧಿ ಬೇರು, ಸೊಗದೆ ಬೇರು, ಅನಂತ ಮೂಲ, ನಾಮ ಬೇರು ಹೀಗೆ ಹಲವು ಹೆಸರುಗಳಲ್ಲಿ ಕರೆಯುತ್ತಾರೆ.